• February 22, 2022

ಉಸಿರುನಿಲ್ಲಿಸಿದ ಮಾತಿನ ಮಲ್ಲಿ..

ಉಸಿರುನಿಲ್ಲಿಸಿದ ಮಾತಿನ ಮಲ್ಲಿ..

ಮೊದಲ ಉಸಿರೆಳೆದುಕೊಂಡು ತನ್ನ ಕಥೆಯನ್ನ ಆರಂಭಿಸೋ ಮಾನವಜೀವ ಕೊನೆ ಉಸಿರನ್ನ ಯಾವಾಗ ಎಳೆಯುತ್ತೋ ತಿಳಿದವರಾರು?? ಈ ರೀತಿಯ ಇನ್ನೊಂದು ಕಥೆ RJ ರಚನಾರದ್ದು. 35ರ ಚಿಕ್ಕವಯಸ್ಸಿನ ಮಾತಿನಮಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.

ಮುದ್ದು ಮುಖ, ಚಿಟಪಟನೆ ಹೊರಬೀಳೋ ಮಾತುಗಳ ಮೂಲಕ ಕನ್ನಡಿಗರ ಮನಸೆಳೆದಿದ್ದ ಜನಪ್ರಿಯ ರೇಡಿಯೋ ಜಾಕಿ ರಚನ. ಕನ್ನಡಿಗರ ಮನೆಮಾತಾಗುವಲ್ಲಿ ಯಶಸ್ವಿಯಾದ ಕೆಲವೇ ಕೆಲವು ರೇಡಿಯೋ ನಿರೂಪಕಿಯರಲ್ಲಿ ರಚನಾ ಕೂಡ ಒಬ್ಬರು. ರೇಡಿಯೋ ಮಿರ್ಚಿಯಲ್ಲಿ ಕೆಲಸ ಮಾಡೋವಾಗ ಅಪಾರ ಕೇಳುಗರನ್ನ ರಚನಾ ಸಂಪಾದಿಸಿದ್ದರು. ಇಂದು ಆ ಎಲ್ಲ ಕೇಳುಗರ ಕಣ್ಣಲ್ಲಿ ನೀರು ತುಂಬಿ ಹೊರಟಿದ್ದಾರೆ.

ಕಳೆದ ಮೂರು ವರ್ಷಗಳಿಂದ RJ ಕೆಲಸ ತ್ಯಜಿಸಿ ಏಕಾಂಗಿಯಾಗಿ ತಮ್ಮ ಮನೆಯಲ್ಲಿದ್ದ ರಚನಾಗೆ ಮನಸ್ಸಿನ ಹತೋಟಿ ತಪ್ಪಿಹೋಗಿತ್ತು ಅನ್ನಲಾಗಿದೆ. ಡಿಪ್ರೆಷನ್, ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎಂದು ಅವರ ಸ್ನೇಹಿತರು ಹಂಚಿಕೊಂಡಿದ್ದಾರೆ. ಎಲ್ಲರನ್ನ ಎಲ್ಲವನ್ನ ನಗಿಸುತ್ತಾ ಮಾತಾಡಿಸುತ್ತ ಖುಷಿಯಾಗಿರುತ್ತಿದ್ದ ರಚನಾಗೆ ತಮ್ಮ ಮನಸ್ಸಿನ ಸಂತೋಷ ದಕ್ಕಿಸಲಾಗಲಿಲ್ಲ. ಇದೇ ಮುಂದುವರಿದು ಇಂದು ಬೆಳಿಗ್ಗೆ ಜೆ ಪಿ ನಗರದಲ್ಲಿದ್ದ ಅವರ ಫ್ಲಾಟ್ ನಲ್ಲೆ ಹೃದಯಾಗತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ತಲುಪುವ ಮೊದಲೇ ರಚನ ನಮ್ಮೆಲ್ಲರನ್ನ ಅಗಲಿದ್ದರು. ಚಾಮರಾಜಪೇಟೆಯ ನಿವಾಸದಲ್ಲಿರೋ ರಚನಾ ತಂದೆ-ತಾಯಿಗೆ ಪಾರ್ಥಿವ ಶರೀರವನ್ನು ಒಪ್ಪಿಸಲು ಎಲ್ಲ ಸಿದ್ಧತೆಯಾಗುತ್ತಿದೆ.

RJ ಯಾಗಿ ಮಾತ್ರವಲ್ಲದೆ, ಸುನಿ ನಿರ್ದೇಶನದ ರಕ್ಷಿತ್ ಶೆಟ್ಟಿ ನಟನೆಯ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಚಿತ್ರದಲ್ಲಿ ನಾಯಕ ರಕ್ಷಿತ್ ರವರ ತಂಗಿ ‘RJ ರಚನಾ’ ಆಗಿ ತಮ್ಮ ಪಾತ್ರಕ್ಕೆ ತಾವೇ ಅತ್ಯದ್ಭುತವಾಗಿ ಜೀವ ತುಂಬಿದ್ದರು ರಚನಾ. ಇದೀಗ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಮ್ಮ ಮರಣಾನಂತರ ಅಂಗಾಂಗಗಳನ್ನು ರಚನಾ ದಾನ ಮಾಡಿದ್ದಾರೆ. ಬೆಳೆಯೋ ವಯಸ್ಸಲ್ಲೇ ಬಿಟ್ಟುಹೋದ ರಚನಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಷ್ಟೇ ನಮ್ಮಿಂದ ಸಾಧ್ಯ.

Leave a Reply

Your email address will not be published. Required fields are marked *