- February 22, 2022
ಜೀ ಕನ್ನಡದಲ್ಲಿ ‘ಡ್ರಾಮಾ’ ಆಡಿಸಲಿರೋ ರಚಿತಾ ರಾಮ್

ಕಿರುತೆರೆಯ ಲೋಕದಲ್ಲಿ ರಿಯಾಲಿಟಿ ಶೋಗಳದ್ದು ವಿಶೇಷ ಪಾತ್ರ. ಹಾಗೇ ಈ ರಿಯಾಲಿಟಿ ಶೋಗಳಲ್ಲಿ ಜೀ ಕನ್ನಡ ವಾಹಿನಿಯದು ಒಂದು ವಿಶೇಷ ಸ್ಥಾನ. ತಮ್ಮ ವಿಭಿನ್ನ ರಿಯಾಲಿಟಿ ಶೋಗಳು ಹಾಗು ಅದರ ನಿರ್ವಹಣೆಯಿಂದ ಕರುನಾಡ ಜನರ ಮನದಲ್ಲಿ ಸಧೃಡವಾಗಿ ನೆಲೆಸಿದ್ದಾರೆ. ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಸರಿ ರಿ ಗ ಮ ಪ ಇವೆ ಮುಂತಾದವು. ಇದೀಗ ಇವರ ಖ್ಯಾತ ಶೋ ‘ಡ್ರಾಮಾ ಜೂನಿಯರ್ಸ್’ ನ ಯಶಸ್ಸಿಗೆ ಹೊಸ ಬಣ್ಣ ತುಂಬೋ ಬರದಲ್ಲಿದ್ದಾರೆ ಜೀ ಕನ್ನಡ.

ಮಾಸ್ಟರ್ ಆನಂದ್ ನಡೆಸಿಕೊಡುವಂತ ಈ ಕಾರ್ಯಕ್ರಮದಲ್ಲಿ ಕಳೆದ ಬಾರಿ ಮುಖ್ಯಮಂತ್ರಿ ಚಂದ್ರು, ಲಕ್ಷ್ಮಿ ಅಮ್ಮ, ಹಾಗೂ ವಿಜಯ್ ರಾಘವೇಂದ್ರ ಅವರ ಸಾರತ್ಯದಲ್ಲಿ ಮಕ್ಕಳು ಡ್ರಾಮಾ ಆಡಿದ್ದರು. ಈ ಬಾರಿ ನಾಲ್ಕನೇ ಸರಣಿಯಲ್ಲಿ ಸಾರಥಿಗಳು ಸಂಪೂರ್ಣ ಹೊಸಬರಾಗೋ ಸಾಧ್ಯತೆ ಇದೆಯಂತೆ. ಈಗಾಗಲೇ ಮಕ್ಕಳು ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನ ಕಿಡ್ನಾಪ್ ಮಾಡುತ್ತಿರೋ ಪ್ರೊಮೊ ಬಿಡೋ ಮೂಲಕ ಜೀ ಕನ್ನಡ ರವಿಮಾಮ ಮಕ್ಕಳೊಂದಿಗಿರಲಿದ್ದಾರೆ ಅನ್ನೋ ಸುಳಿವು ಕೊಟ್ಟಿತ್ತು. ಇದೀಗ ಕೇಳಿಬರುತ್ತಿರೋ ಸುದ್ದಿಗಳ ಪ್ರಕಾರ ಸ್ಯಾಂಡಲ್ವುಡ್ ನ ಬಹುಬೇಡಿಕೆಯ ನಟಿ ರಚಿತ ರಾಮ್ ಕೂಡ ಮಕ್ಕಳನ್ನ ಮುನ್ನಡೆಸಲಿದ್ದಾರೆ ಅನ್ನಲಾಗಿದೆ.



ಹೌದು, ಡಿಂಪಲ್ ಕ್ವೀನ್ ನ ಪ್ರೊಮೊ ಒಂದನ್ನು ಹೈದ್ರಾಬಾದ್ ನಲ್ಲಿ ಚಿತ್ರೀಕರಿಸಲಾಗಿದೆ. ಸದ್ಯದಲ್ಲೇ ಕಿರುತೆರೆ ಪ್ರೇಕ್ಷಕರ ಕಣ್ಣ ಮುಂದೆ ಈ ಪ್ರೊಮೊ ಹರಿದಾಡಲಿದೆಯಂತೆ.ಇದರ ಮೂಲಕ ರಚಿತ ರಾಮ್ ಮರಳಿ ತವರಿಗೆ ಬಂದಂತಾಗಿದೆ. ರಚಿತ ತಮ್ಮ ತೆರೆಮೇಲಿನ ನಟನ ಪ್ರಪಂಚವನ್ನ ಆರಂಭಿಸಿದ್ದು ಇದೇ ಜೀ ವಾಹಿನಿಯಲ್ಲಿ. ಸುಮಾರು ಹತ್ತು ವರ್ಷಗಳ ಹಿಂದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಅರಸಿ’ ಧಾರಾವಾಹಿ ರಚಿತಾರವರ ಮೊದಲ ಧಾರಾವಾಹಿ ಆಗಿತ್ತು. ಇದೀಗ ಹತ್ತು ವರ್ಷಗಳ ನಂತರ ಮತ್ತೆ ರಚ್ಚು ಜೀ ಬಳಗವನ್ನ ಸೇರಲಿದ್ದಾರೆ.
