- February 22, 2022
ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿಯಾದ ಮೇಘನಾ ರಾಜ್

ಚರ್ತುಭಾಷಾ ತಾರೆ ಎಂದೇ ಗುರುತಿಸಿಕೊಂಡಿರುವ ಮೇಘನಾ ರಾಜ್ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಗರ್ಭಿಣಿಯಾದ ನಂತರ ನಟನಾ ಕ್ಷೇತ್ರದಿಂದ ಕೊಂಚ ದೂರವಿದ್ದ ಮೇಘನಾ ರಾಜ್ ಇದೀಗ ಮತ್ತೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಸಿನಿಪ್ರಿಯರಿಗೆ ಸಂತಸ ತಂದಿದೆ.
ಸ್ನೇಹಿತ ಪನ್ನಗಭರಣ ನಿರ್ದೇಶನದ ಇನ್ನೂ ಹೆಸರಿಡಬೇಕಾದ ಚಿತ್ರದ ಮೂಲಕ ಹಿರಿತೆರೆಗೆ ಕಂ ಬ್ಯಾಕ್ ಆಗಿರುವ ಮೇಘನಾ ರಾಜ್ ಇದೀಗ ಮಗದೊಂದು ಸಿನಿಮಾ ಒಪ್ಪಿಕೊಂಡಿರುವ ಮೂಲಕ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೇಘನಾ ರಾಜ್ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಮೇಘನಾ ರಾಜ್ ಅವರಿಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟ “ಇರುವುದೆಲ್ಲವ ಬಿಟ್ಟು” ಚಿತ್ರತಂಡದ ಜೊತೆ ಇನ್ನೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದು “ಇರುವದೆಲ್ಲವ ಬಿಟ್ಟು ಸಿನಿಮಾದ ತಂಡದೊಂದಿಗೆ ಹೊಸ ಸಿನಿಮಾ ಶಬ್ಧವನ್ನು ಒಪ್ಪಿಕೊಂಡಿದ್ದೇನೆ. ತುಂಬಾ ಸಂತಸವಾಗುತ್ತಿದೆ. ಇರುವುದೆಲ್ಲವ ಬಿಟ್ಟು ಸಿನಿಮಾದ ಪೂರ್ವಿ ಪಾತ್ರಕ್ಕೆ ನನಗೆ ರಾಜ್ಯ ಪ್ರಶಸ್ತಿ ಕೂಡಾ ದೊರಕಿತ್ತು. ನನಗೆ ಈ ಚಿತ್ರತಂಡದ ಬಗ್ಗೆ ಆಪರವಾದ ಗೌರವವೂ ಇದೆ. ಕಾಂತ ಕನ್ನಳ್ಳಿ ಹಾಗೂ ತಂಡದ ಜೊತೆ ಮತ್ತೊಮ್ಮೆ ಕೆಲಸ ಮಾಡುವುದು ನನ್ನ ಪಾಲಿಗೆ ದೊರೆತ ವರವೇ ಸರಿ. ನಿಮ್ಮೆಲ್ಲರ ಪ್ರೋತ್ಸಾಹ, ಹಾರೈಕೆ ಸದಾ ನನ್ನ ಮೇಲಿರಲಿ. ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಸದ್ಯ ಕಲರ್ಸ್ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿರುವ ಮೇಘನಾ ರಾಜ್ ಮುಂದಿನ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರೂ ಅಚ್ಚರಿಯೇನಿಲ್ಲ.

2018ರಲ್ಲಿ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾಗಿದ್ದ ಮೇಘನಾ ತೆರೆ ಮೇಲೆ ಕಾಣಿಸಿಕೊಳ್ಳದೇ ವರ್ಷಗಳೇ ಕಳೆದಿವೆ. ಗರ್ಭಿಣಿಯಾಗಿದ್ದ ಕಾರಣದಿಂದ ಚಿರು ಇದ್ದಾಗಲೇ ಸಿನಿರಂಗದಿಂದ ದೂರ ಉಳಿದಿದ್ದರು ಮೇಘನಾ.

ಜೀವನದಲ್ಲಿ ನಡೆದ ಕಹಿಘಟನೆಗಳಿಂದ ಬಣ್ಣದ ಲೋಕಕ್ಕೆ ಬೈ ಹೇಳಬಹುದು ಎಂದುಕೊಂಡಿದ್ದರು. ಆದರೆ ನಮ್ಮ ಕುಟುಂಬಕ್ಕೆ ಸಿನಿಮಾನೇ ಜೀವನ ಎಂದಿದ್ದರು. ಮಗ ರಾಯನ್ ರಾಜ್ ಸರ್ಜಾ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ಮೇಘನಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಹಿರಿತೆರೆಯಲ್ಲಿಯೂ ರಂಜಿಸಲಿದ್ದಾರೆ.