- January 25, 2022
ಪ್ರೀತು ಮಾತ್ರ ನನಗೆ ಸಾಕಷ್ಟು ಜನಪ್ರಿಯತೆ ನೀಡಿದೆ – ಸಿದ್ಧು ಮೂಲಿಮನಿ

ರಂಗಭೂಮಿಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಅನೇಕ ಪ್ರತಿಭೆಗಳು ಇಂದು ಮನೋಜ್ಞ ನಟನೆಯ ಮೂಲಕ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಮೋಡಿ ಮಾಡುತ್ತಿರುವುದನ್ನು ನಾವು ನೋಡಬಹುದು. ಆ ಸಾಲಿಗೆ ಸಿದ್ಧು ಮೂಲಿಮನಿ ಕೂಡಾ ಸೇರಿದ್ದಾರೆ. ಸಿದ್ಧು ಮೂಲಿಮನಿ ಎಂದರೆ ಯಾರು ಎಂಬ ಕನ್ ಫ್ಯೂಶನ್ ನಿಮ್ಮ ಮನದಲ್ಲಿ ಒಂದು ಕ್ಷಣ ಮೂಡಿದರೆ ಅಚ್ಚರಿಯೇನಿಲ್ಲ. ಯಾಕೆಂದರೆ ಕಿರುತೆರೆ ವೀಕ್ಷಕರ ಪಾಲಿಗೆ ಆತ ಪ್ರೀತಿಯ ಪ್ರೀತು! ಬಹುಶಃ ಅದೇ ಕಾರಣದಿಂದ ಅವರ ನಿಜವಾದ ಹೆಸರು ಸಿದ್ದು ಎನ್ನುವುದು ಹಲವರಿಗೆ ತಿಳಿದಿರಲಿಕ್ಕಿಲ್ಲ ಬಿಡಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಅರಸನ ಕೋಟೆ ಅಖಿಲಾಂಡೇಶ್ವರಿ ಕಿರಿಮಗ ಪ್ರೀತಮ್ ಆಲಿಯಾಸ್ ಪ್ರೀತು ಆಗಿ ಅಭಿನಯಿಸುತ್ತಿರುವ ಸಿದ್ಧು ಮೂಲಿಮನಿ ಇಂದು ಕರುನಾಡಿನಾದ್ಯಂತ ಅದೇ ಪಾತ್ರದ ಮೂಲಕ ಫೇಮಸ್ಸು.

“ನಾನು ಇಂದು ಎತ್ತ ಹೋದರೂ ಜನ ನನ್ನನ್ನು ಗುರುತಿಸುವುದು ಪ್ರೀತು ಆಗಿ, ಅಖಿಲಾಂಡೇಶ್ವರಿ ಮಗನಾಗಿ. ಅಷ್ಟರ ಮಟ್ಟಿಗೆ ನನಗೆ ಆ ಪಾತ್ರ ಜನಪ್ರಿಯತೆಯನ್ನು ನೀಡಿದೆ. ಪಾರು ಧಾರಾವಾಹಿಯ ಮೊದಲು ನಾನು ನಾಲ್ಕೈದು ಧಾರಾವಾಹಿಗಳಲ್ಲಿ ನಟಿಸಿದ್ದರೂ ನನಗೆ ಹೆಸರು ತಂದುಕೊಟ್ಟಿದ್ದು ಪ್ರೀತು ಮಾತ್ರ. ತುಂಬಾ ಸಂತಸವಾಗುತ್ತಿದೆ” ಎಂದು ಹೇಳುತ್ತಾರೆ ಸಿದ್ಧು ಮೂಲಿಮನಿ.

ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಜನಪ್ರಿಯವಾದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸಿದ್ಧು ಮೂಲಿಮನಿ ಮುಂದೆ ಹಂಸಲೇಖ ಅವರ ಕಾಲೇಜು ಸೇರಿ ನಟನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡರು. ತದ ನಂತರ ರಂಗಾವತಾರ ತಂಡದಲ್ಲಿ ಗುರುತಿಸಿಕೊಂಡಿದ್ದ ಸಿದ್ಧು ಮೂಲಿಮನಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಣ್ಣದ ಬುಗುರಿ ಧಾರಾವಾಹಿಯ ಮೂಲಕ ಕಿರುತೆರೆ ನಂಟು ಬೆಳೆಸಿಕೊಂಡರು.

ಬಣ್ಣದ ಬುಗುರಿಯ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅನುರಾಗ ಸಂಗಮ, ಜೀ ಕನ್ನಡ ವಾಹಿನಿಯ ಒಂದೂರಲ್ಲಿ ರಾಜ ರಾಣಿ, ಉದಯ ವಾಹಿನಿಯ ಸಾಕ್ಷಿ ಹೀಗೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದರು. ಇದೀಗ ಪಾರು ಧಾರಾವಾಹಿಯ ಪ್ರೀತು ಆಗಿ ಕಿರುತೆರೆಯಲ್ಲಿ ಸಕತ್ ಬ್ಯುಸಿಯಾಗಿರುವ ಸಿದ್ಧು ಮೂಲಿಮನಿ ಈಗಾಗಲೇ ಹಿರಿತೆರೆಯಲ್ಲಿಯೂ ಛಾಪು ಮೂಡಿಸಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ಅವರು ಇದೀಗ ವಿಕ್ರಾಂತ್ ರೋಣ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದು, ಅದನ್ನು ಕೂಡಾ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವುದು ವಿಶೇಷ.