• January 25, 2022

ಲೆಕ್ಚರರ್ ಮುರಳಿ ಆಗಿ ಕಿರುತೆರೆಗೆ ಕಂ ಬ್ಯಾಕ್ ಆದ ಪವನ್ ಕುಮಾರ್

ಲೆಕ್ಚರರ್ ಮುರಳಿ ಆಗಿ ಕಿರುತೆರೆಗೆ ಕಂ ಬ್ಯಾಕ್ ಆದ ಪವನ್ ಕುಮಾರ್

ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಲೆಕ್ವರರ್ ಮುರಳಿ ಆಗಿ ನಟಿಸುತ್ತಿರುವ ಪವನ್ ಕುಮಾರ್ ನಟನಾ ಜಗತ್ತಿಗೆ ಹೊಸಬರೇನಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕಿನ್ನರಿಯಲ್ಲಿ ನಾಯಕ ನಕುಲ್ ಆಲಿಯಾಸ್ ಶಿವಂ ಆಗಿ ನಟಿಸಿ ವೀಕ್ಷಕರ ಮನ ಸೆಳೆದಿರುವ ಪವನ್ ಕುಮಾರ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

ಪದವಿ ಪಡೆದಿರುವ ಪವನ್ ಕುಮಾರ್ ಗೆ ಮೊದಲಿನಿಂದಲೂ ಬಣ್ಣದ ಜಗತ್ತಿನತ್ತ ವಿಶೇಷವಾದ ಒಲವಿತ್ತು. ನಟನಾ ಲೋಕದಲ್ಲಿಯೇ ಬದುಕು ರೂಪಿಸಿಕೊಳ್ಳುವ ಕನಸು ಕಂಡಿದ್ದ ಪವನ್ ಕುಮಾರ್ ಮೊದಲಿಗೆ ನಟನಾ ತರಬೇತಿ ಪಡೆಯುವ ನಿರ್ಧಾರ ಮಾಡಿದರು. ನಟನೆಯ ರೀತಿ ನೀತಿಗಳು ತಿಳಿಯದಿದ್ದ ಪವನ್ ಕುಮಾರ್ ಅದನ್ನು ಕಲಿಯುವ ಸಲುವಾಗಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸಂಸ್ಥೆ ಸೇರಿದರು. ಅಲ್ಲಿ ಪರಿಪೂರ್ಣವಾಗಿ ನಟನೆಯ ಆಳ ಅಗಲ ತಿಳಿದ ಪವನ್ ಕುಮಾರ್ ಮೊದಲು ನಟಿಸಿದ್ದು ಕಿರುಚಿತ್ರದಲ್ಲಿ.

ಮಾದಕ ಎನ್ನುವ ಕಿರುಚಿತ್ರದಲ್ಲಿ ನಟಿಸಿದ್ದ ಪವನ್ ಕುಮಾರ್ ಮುಂದೆ ನಾ ನಿನ್ನ ಬಿಡಲಾರೆ , ಪತ್ತೇದಾರಿ ಪ್ರತಿಭಾ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಕಿರುತೆರೆಗೆ ಹಾರಿದರು. ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದಂತಹ ಮಹಾಕಾಳಿ ಧಾರಾವಾಹಿಯಲ್ಲಿ ಚಂದ್ರನಾಗಿ ಕಾಣಿಸಿಕೊಂಡಿದ್ದ ಪವನ್ ಕುಮಾರ್ ತದ ನಂತರ ಮಗದೊಂದು ಪೌರಾಣಿಕ ಧಾರಾವಾಹಿ ಜೈ ಹನುಮಾನ್ ನಲ್ಲಿ ರಾಜ ಸತ್ಯವ್ರತ ಪಾತ್ರಕ್ಕೆ ಜೀವ ತುಂಬಿದರು.

ಮುಂದೆ ಕಿನ್ನರಿಯ ನಕುಲ್ ಆಗಿ ಬದಲಾದ ಪವನ್ ಕುಮಾರ್ ಗೆ ಆ ಪಾತ್ರ ನೀಡಿದ ಜನಪ್ರಿಯತೆಯನ್ನು ಅಷ್ಟಿಷ್ಟಲ್ಲ. ಎರಡು ಶೇಡ್ ಇರುವಂತಹ ಆ ಪಾತ್ರವನ್ನು ವೀಕ್ಷಕರು ಕೂಡಾ ಮೆಚ್ಚಿಕೊಂಡಿದ್ದರು. ಕಿನ್ನರಿ ಧಾರಾವಾಹಿಯ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿಯಲ್ಲಿ ಜರ್ನಲಿಸ್ಟ್ ಆಗಿ ಸೈ ಎನಿಸಿಕೊಂಡಿದ್ದ ಈ ಹ್ಯಾಂಡ್ ಸಮ್ ಹುಡುಗ ಗಟ್ಟಿಮೇಳ ಧಾರಾವಾಹಿಯಲ್ಲಿ ವಿಲನ್ ಆಗಿಯೂ ಅಬ್ಬರಿಸಿದ್ದರು.

ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮುರಳಿ ಯಾಗಿ ಅಭಿನಯಿಸುತ್ತಿರುವ ಅವರು “ಇಲ್ಲಿಯ ತನಕ ನಾನು ಅಭಿನಯಿಸಿರುವಂತಹ ಧಾರಾವಾಹಿಗಳಲ್ಲಿ ಭಿನ್ನ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಅದೇ ರೀತಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಾನು ಲೆಕ್ಚರರ್ ಆಗಿ ನಟಿಸುತ್ತಿದ್ದೇನೆ. ಬ್ಯಾಚುಲರ್ ಆಗಿರುವ ಮುರಳಿ ದೇವಿಪುರ ಎನ್ನುವ ಹಳ್ಳಿಯಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿರುತ್ತೇನೆ. ಇದು ನನ್ನ ಮೊದಲ ಕೆಲಸವಾಗಿದ್ದು ನಾನು ದೇವಿಪುರದಲ್ಲಿಯೇ ಸೆಟಲ್ ಆಗಿರುತ್ತೇನೆ. ಇದರ ನಡುವೆ ಪುಟ್ಟಕ್ಕನ ದೊಡ್ಡ ಮಗಳು ಸಹನಾ ಮೇಲೆ ನನಗೆ ಪ್ರೀತಿ ಉಂಟಾಗುತ್ತದೆ.
ಮುಂದೇನಾಗುತ್ತದೆ ಎಂದು ತಿಳಿಯಲು ನೀವು ಧಾರಾವಾಹಿ ನೋಡಬೇಕಷ್ಟೇ” ಎಂದು ಹೇಳುತ್ತಾರೆ ಪವನ್ ಕುಮಾರ್.

Leave a Reply

Your email address will not be published. Required fields are marked *