- January 25, 2022
ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ ಕಿರಣ್ ರಾಜ್

ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ನಟಿಸುತ್ತಿರುವ ಕಿರಣ್ ರಾಜ್ ಅವರ ಆರೋಗ್ಯದ ಕುರಿತಾಗಿ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಇದರ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಕೇಳಿ ಬರುತ್ತಿರುವ ವದಂತಿಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ ಕಿರಣ್ ರಾಜ್. ಜೊತೆಗೆ “ದಯಮಾಡಿ ಯಾವತ್ತಿಗೂ ಸುಳ್ಳುಸುದ್ದಿ ಹಬ್ಬಿಸಬೇಡಿ. ಇದು ನನ್ನ ಕುಟುಂಬಕ್ಕೂ ಇಫೆಕ್ಟ್ ಮಾಡುತ್ತದೆ” ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಇದರ ಜೊತೆಗೆ “ಇದೆಲ್ಲಾ ಆರಂಭವಾದುದು ಹೇಗೆ ಎಂಬುದೇ ನನಗೆ ತಿಳಿಯುತ್ತಿಲ್ಲ. ನನ್ನ ಆರೋಗ್ಯ ಸರಿಯಿಲ್ಲ, ನನಗೆ ಹುಷಾರಿಲ್ಲ ಎನ್ನುವಂತಹ ಕ್ಯಾಪ್ಷನ್ ಗಳಿರುವಂತಹ ಲಿಂಕ್ ಗಳನ್ನು, ವಿಚಾರಗಳನ್ನು ನಾನು ಗಮನಿಸಿದ್ದು ಅದು ನನ್ನನ್ನು ನಿಜವಾಗಿಯೂ ಡಿಸ್ಟರ್ಬ್ ಆಗುವಂತೆ ಮಾಡಿದೆ. ಆದರೆ ನಾನು ಹುಷಾರಾಗಿದ್ದೇನೆ ಮಾತ್ರವಲ್ಲ ಆರೋಗ್ಯವಾಗಿದ್ದೇನೆ.” ಎಂದು ಹೇಳಿದ್ದಾರೆ ಕಿರಣ್ ರಾಜ್

“ಅಂದ ಹಾಗೇ ಈಗಾಗಲೇ ಹರಿದಾಡುತ್ತಿರುವಂತಹ ಫೋಟೋಗಳಲ್ಲಿ ನಾನು ಆಸ್ಪತ್ರೆಯಲ್ಲಿ ಮಲಗಿರುವ ಹಾಗೇ ಕಾಣಿಸುವಂತೆ ಎಡಿಟ್ ಮಾಡಲಾಗಿದೆ. ಆದರೆ ಅದ್ಯಾಕೆ ಆ ತರಹ ಮಾಡುತ್ತಿದ್ದಾರೆ ಎಂದೇ ನನಗೆ ಅರ್ಥವಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಕಿರಣ್ ರಾಜ್.

“ಸೆಲೆಬ್ರಿಟಿಗಳ ಜೀವನದಲ್ಲಿ ಸೋಶಿಯಲ್ ಮೀಡಿಯಾ ಅತೀ ಮುಖ್ಯ ಪಾತ್ರವಹಿಸುತ್ತಿದೆ. ಆದರೆ ಅದೇ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಇದು ನಮ್ಮ ಪರ್ಸನಲ್ ಜೀವನಕ್ಕೂ ಪರಿಣಾಮ ಬೀರುವಂತೆ ಮಾಡುತ್ತಿದೆ. ದಯವಿಟ್ಟು ಇನ್ನು ಮುಂದೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ” ಎಂದಿದ್ದಾರೆ ಕಿರಣ್ ರಾಜ್.

