- February 21, 2022
‘ಓಲ್ಡ್ ಮೊಂಕ್’ ನೋಡಲು ಚಿತ್ರಮಂದಿರಕ್ಕೇ ಬನ್ನಿ ಎಂದ ನಿರ್ದೇಶಕ

ತಮ್ಮ ಸಿನಿಮಾ ಬಿಡುಗಡೆ ಆಗೋವಾಗ ಎಲ್ಲ ಕಡೆ ಪ್ರಚಾರ ಮಾಡೋದು ಸಿನಿಮಾದ ಯಶಸ್ಸಿಗೆ ಅನಿವಾರ್ಯ ಅಂಶ. ಪ್ರತೀ ಚಿತ್ರತಂಡ ಕೂಡ ತನ್ನದೇ ಆದ ವಿಶೇಷ ರೀತಿಯಲ್ಲಿ ಜನರಿಗೆ ತಮ್ಮ ಸಿನಿಮಾ ತಲುಪಿಸುತ್ತಲೇ ಇರುತ್ತದೆ. ಸೋಶಿಯಲ್ ಮೀಡಿಯಾದಿಂದ ಹಿಡಿದು ಊರಿಂದ ಊರಿಗೆ ಹೋಗಿ ಜನರನ್ನ ತಲುಪುವ ತನಕ ಎಲ್ಲ ರೀತಿ ಪ್ರಯತ್ನಗಳನ್ನು ಮಾಡ್ತಾನೆ ಇರ್ತಾರೆ. ಈ ಸಾಲಿನಲ್ಲಿ ‘ಓಲ್ಡ್ ಮೊಂಕ್’ ಚಿತ್ರತಂಡ ಹೊಸ ಹೊಸ ಪ್ರಯತ್ನಗಳನ್ನ ಮಾಡ್ತಾನೆ ಇದಾರೆ.


‘ಟೋಪಿವಾಲ’, ‘ಶ್ರೀನಿವಾಸ ಕಲ್ಯಾಣ’, ‘ಬೀರಬಲ್’ ಈ ರೀತಿಯ ಹಿಟ್ ಚಿತ್ರಗಳನ್ನ ಕನ್ನಡಿಗರ ಎದುರಿಗಿಟ್ಟ ಯುವ ನಟ-ನಿರ್ದೇಶಕ ಎಂ. ಜಿ. ಶ್ರೀನಿವಾಸ್ ಅವರ ಮುಂದಿನ ಚಿತ್ರ ‘ಓಲ್ಡ್ monk’. ಇದೇ ಫೆಬ್ರವರಿ 25ರಂದು ಬೆಳ್ಳಿತೆರೆ ಮೇಲೆ ರಾರಾಜಿಸಲು ಚಿತ್ರ ಸಜ್ಜಾಗಿ ನಿಂತಿದೆ. ಆದ್ದರಿಂದಲೇ ಚಿತ್ರದ ಪ್ರಮೋಷನ್ ಚಟುವಟಿಕೆಗಳು ಸಹ ಅಷ್ಟೇ ಬಿರುಸಿನಿಂದ ನಡೆಯುತ್ತಿವೆ. ತಮ್ಮ ಕ್ರಿಯೇಟಿವಿಟಿಗೆ ಹೆಸರಾಂದಂತ ಶ್ರೀನಿ ಸಿನಿಪ್ರಚಾರದ ವಿಷಯದಲ್ಲೂ ಅಷ್ಟೇ ಚಾಕಚಕ್ಯತೆ ತೋರಿದ್ದಾರೆ.

ಪ್ರಮುಖ ನಗರಗಳಿಗೆ ಭೇಟಿಕೊಟ್ಟು ಅಲ್ಲಿನ ಸಿನಿಪ್ರಿಯರಲ್ಲಿ ತಮ್ಮ ಚಿತ್ರದ ಕಡೆಗೆ ಸೆಳೆತ ಮೂಡುವಂತೆ ಮಾಡುವುದು ಮೊದಲ ಹೆಜ್ಜೆಯಾದರೆ, ಆನ್ಲೈನ್ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರದ ಕೆಲಸ ನಡೆಸೋದು ಇನ್ನೊಂದು ಹೆಜ್ಜೆ. ಅವೆಂಜರ್ಸ್ ಹೋಲುವ ಪೋಸ್ಟರ್ ಗಳು, ಪೆಟಿಎಂ, ಫೋನ್ ಪೇ ನಂತಹ ಆಪ್ ಗಳ QR ಕೋಡ್ಗಳ ಮೇಲೆ ತಮ್ಮ ಸಿನಿಮಾ ಸಂಭಂದಿ ಭಾವಚಿತ್ರ ಅಂಟಿಸೋ ಮೂಲಕ ಎಲ್ಲೆಡೆ ಸುದ್ದಿಯಾಗಿತ್ತು ಈ ಚಿತ್ರತಂಡ. ಸ್ಟ್ಯಾಂಡಪ್ ಕಾಮಿಡಿ ಶೋಗಳು, ಟೈಮ್ ಸ್ಕ್ವೇರ್, ಭುರ್ಜ್ ಖಲಿಫಾದಂತಹ ಪ್ರಸಿದ್ಧ ಸ್ಥಳಗಲ್ಲಿ ತಮ್ಮ ಚಿತ್ರದ ಪೋಸ್ಟರ್ ಕಾಣುವಂತಿರೋ ದೃಶ್ಯ ಸಂಯೋಜನೆಗಳು ಈ ತರಹದ ಹಲವಾರು ಪ್ರಯೋಗಗಳನ್ನ ಚಿತ್ರತಂಡ ಮಾಡುತ್ತಿದೆ.



ಇದೀಗ ಶ್ರೀನಿ ಹಾಗೂ ಉಳಿದ ಚಿತ್ರತಂಡದವರು ಆನ್ಲೈನ್ನಲ್ಲಿ ಸಂದರ್ಶನ ಹಾಗೆ ವಿಡಿಯೋಗಳನ್ನು ಮಾಡೋ, ಮಾಡಿಸೋ ಮೂಲಕ ಜನರ ತಲೆಯಲ್ಲಿ ತಮ್ಮ ಸಿನಿಮಾದ ಗುಂಗು ಹೋಗದೆ ಇರೋ ಹಾಗೆ ನೋಡಿಕೊಳ್ಳುತ್ತಿದಾರೆ. ಇತ್ತೀಚಿಗಷ್ಟೇ ಶ್ರೀನಿ ಮಾಡಿದಂತ ವಿಡಿಯೋ ಒಂದರಲ್ಲಿ ತಮ್ಮ ಹಿಂದಿನ ಚಿತ್ರಗಳಿಗೆ ಮಾಡಿದಂತೆ ಮನೆಯಲ್ಲೇ ಕೂತು ಸಿನಿಮಾ ನೋಡದೆ.. ಚಿತ್ರಮಂದಿರಕ್ಕೇ ಬಂದು ತಮ್ಮ ಚಿತ್ರವನ್ನ ಹಾಗೆ ಅದರಲ್ಲಿ ಕೆಲಸ ಮಾಡಿದ ಕಲಾವಿದರನ್ನ ಹರಸಬೇಕೆಂದು ಜನರಲ್ಲಿ ಕೇಳಿಕೊಂಡಿದ್ದಾರೆ.
ಇದೇ 25ನೇ ತಾರೀಕು ಪ್ರೇಕ್ಷಕರೆದುರು ಪ್ರತ್ಯಕ್ಷವಾಗಲಿರೋ ಈ ಸಿನಿಮಾದಲ್ಲಿ ಶ್ರೀನಿ ಜೊತೆ ಅದಿತಿ ಪ್ರಭುದೇವ, ಸಿಹಿಕಹಿ ಚಂದ್ರು, ಸುಜಯ್ ಶಾಸ್ತ್ರೀ ಮುಂತಾದ ದೊಡ್ಡ ತಾರಾಬಳಗವೆ ಇದೆ.
