- January 22, 2022
ಅಳುಮುಂಜಿ ಪಾತ್ರದಲ್ಲಿ ನಟಿಸಲು ಇಷ್ಟವಿಲ್ಲ – ರೋಶ್ನಿ ತೇಲ್ಕರ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತಲ್ತಿದ್ದ ಕಿನ್ನರಿ ಧಾರಾವಾಹಿಯಲ್ಲಿ ಖಳನಾಯಕಿ ಐಶ್ವರ್ಯಾ ಆಗಿ ಅಭಿನಯಿಸಿದ್ದ ರೋಶ್ನಿ ತೇಲ್ಕರ್ ಸಣ್ಣ ಬ್ರೇಕ್ ನ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಅದು ಕೂಡಾ ವಿಲನ್ ಆಗಿ! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನವ್ಯಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ ರೋಶ್ನಿ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರೋಶ್ನಿ “ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಾನು ನಮೃತಾ ನಾದಿನಿ ನವ್ಯಾ ಆಗಿ ನಟಿಸುತ್ತಿದ್ದೇನೆ. ರಾಜ್ ಗುರು ಮನೆತನದ ಸೊಸೆ ಅಹಲ್ಯಾ ತಂಗಿ ನಮೃತಾ ನನ್ನ ಅಣ್ಣನನ್ನು ಪ್ರೀತಿಸಿ ಮದುವೆಯಾಗಿರುತ್ತಾಳೆ. ನನಗೆ ಪ್ರಣವ್ ನನ್ನು ಮದುವೆಯಾಗುವ ಕನಸಿರುತ್ತದೆ. ಜೊತೆಗೆ ರಾಜ್ ಗುರು ಆಸ್ತಿ ಮೇಲೆ ಕಣ್ಣೀರುತ್ತದೆ. ಅಣ್ಣನ ಮುಂದೆ ಮುಗ್ಧೆಯಂತೆ ನಟಿಸುತ್ತೇನೆ. ಆದರೆ ಅತ್ತಿಗೆಗೆ ಅದು ಗೊತ್ತಿರುತ್ತದೆ. ಆದರೆ ಯಾರೂ ಕೂಡಾ ಅವರ ಮಾತನ್ಜು ನಂಬುವುದಿಲ್ಲ” ಎಂದು ಹೇಳುತ್ತಾರೆ.

ನಮ್ಮನೆ ಯುವರಾಣಿ ಧಾರಾವಾಹಿಯ ನಂತರ ಸೀತಾವಲ್ಲಭ ಧಾರಾವಾಹಿಯಲ್ಲಿ ಡ್ರೈವರ್ ಮಗಳಾಗಿ ಕಾಣಿಸಿಕೊಂಡಿದ್ದರು. ಮುಂದೆ ಮರಳಿ ಬಂದಳು ಸೀತೆ ಧಾರಾವಾಹಿಯಲ್ಲಿ ಖಳನಾಯಕಿ ಅಂಗದ ಪಾತ್ರಕ್ಕೆ ಜೀವ ತುಂಬಿದ್ದರು. ತೆಲುಗು ಕಿರುತೆರೆಗೆ ಕಾಲಿಟ್ಟು ಪರಭಾಷೆಯಲ್ಲಿ ಮೋಡಿ ಮಾಡಿದ್ದ ರೋಶ್ನಿ ಬೈ ಒನ್ ಗೆಟ್ ಒನ್ ಫ್ರೀ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿಯೂ ಮೋಡಿ ಮಾಡಿದರು.

ಮುಂದೆ ನಟನೆಕೊಂಚ ಬ್ರೇಕ್ ತೆಗೆದುಕೊಂಡ ರೋಶ್ನಿ ಇದೀಗ ಮರಳಿ ಬಂದಿದ್ದಾರೆ. “ನಾನು ಅಭಿನಯಿಸಿದ ಧಾರಾವಾಹಿಗಳಲ್ಲಿ ನಾನು ಖಳನಾಯಕಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಅದು ನನಗೆ ತುಂಬಾ ಇಷ್ಟ. ಜೊತೆಗೆ ಸದಾ ಕಾಲ ಕಣ್ಣೀರು ಹಾಕಿ ಅಳುವ ಅಳುಮುಂಜಿ ಪಾತ್ರ ನನಗೆ ಇಷ್ಟವಿಲ್ಲ. ಲಾಂಗ್ ಗ್ಯಾಪ್ ನ ನಂತರ ಮತ್ತೆ ಖಳನಾಯಕಿಯಾಗಿ ಅಬ್ಬರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ ಎನ್ನುತ್ತಾರೆ ರೋಶ್ನಿ.

