- January 21, 2022
ಆಡಿಯೋ ಟೀಸರ್ ಮೂಲಕ ಕಮಾಲ್ ಮಾಡಲಿರುವ ತೋತಾಪುರಿ ತಂಡ

ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಷನ್ ಈಗಾಗಲೇ ‘ನೀರ್ ದೋಸೆ’ ಮೂಲಕ ದೊಡ್ಡ ದಾಖಲೆ ಬರೆದಿದೆ. ಇದೇ ಜೋಡಿ ‘ತೋತಾಪುರಿ’ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಲು ಸನ್ನದ್ಧವಾಗಿದೆ. ಅದಕ್ಕಾಗಿ ‘ತೋತಾಪುರಿ’ ಮೊದಲ ಝಲಕ್ ಕೂಡ ಸಿದ್ಧವಾಗಿದ್ದು ಇದೇ ಜನವರಿ 24ರಂದು ಆಡಿಯೋ ಟೀಸರ್ ಮೂಲಕ ಎದುರುಗೊಳ್ಳಲು ಚಿತ್ರತಂಡ ಸಜ್ಜಾಗಿದೆ.

ಪ್ರಾರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿರುವ ‘ತೋತಾಪುರಿ’ ಬಗ್ಗೆ ಚಿತ್ರರಂಗದಲ್ಲೂ ತುಂಬಾ ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಇದೇ ಮಾದಲ ಬಾರಿಗೆ ಕನ್ನಡ ಕಾಮಿಡಿ ಸಿನಿಮಾವೊಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ.


ತಾರಾಗಣದ ವಿಷಯದಲ್ಲೂ ‘ತೋತಾಪುರಿ’ ಕಡಿಮೆಯೇನಿಲ್ಲ. ನವರಸ ನಾಯಕ ಜಗ್ಗೇಶ್ ಆದಿಯಾಗಿ ‘ಡಾಲಿ’ ಧನಂಜಯ್, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್, ರೋಹಿತ್ ಪದಕಿ ಸೇರಿದಂತೆ ನೂರಾರು ಕಲಾವಿದರು ಈ ಸಿನಿಮಾದಲ್ಲಿದ್ದಾರೆ.
ಈ ಹಿಂದೆ ಎರಡನೇ ಮದುವೆ, ಗೋವಿಂದಾಯ ನಮಃ, ಆರ್ ಎಕ್ಸ್ ಸೂರಿ, ಶಿವಲಿಂಗ ಮೊದಲಾದ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ‘ಮೋನಿಫ್ಲಿಕ್ಸ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ‘ತೋತಾಪುರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ‘ತೋತಾಪುರಿ’ ಭಾಗ 1 ಹಾಗೂ ಭಾಗ 2 ರೂಪದಲ್ಲಿ ಬಿಡುಗಡೆಯಾಗಲಿದೆ ಎಂಬುದು ಮತ್ತೊಂದು ವಿಶೇಷ.
