- February 23, 2022
ಬೌನ್ಸರ್ ಆಗಿ ರಂಜಿಸಲು ತಯಾರಾಗಿದ್ದಾರೆ ಮಿಲ್ಕಿ ಬ್ಯೂಟಿ

ಮಿಲ್ಕಿ ಬ್ಯೂಟಿ ಎಂದೇ ಬಣ್ಣದ ಜಗತ್ತಿನಲ್ಲಿ ಮನೆ ಮಾತಾಗಿರುವ ದಕ್ಷಿಣ ಭಾರತದ ಜನಪ್ರಿಯ ನಟಿ ತಮನ್ನಾ ಭಾಟಿಯಾ ಈಗ ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ. ಬೋಲೇ ಚೂಡಿಯಾನ್, ಪ್ಲಾನ್ ಎ ಪ್ಲಾನ್ ಬಿ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಮಿಲ್ಕಿ ಬ್ಯೂಟಿ ಸದ್ಯ “ಬಬ್ಲಿ ಬೌನ್ಸರ್” ಎಂಬ ಸಿನಿಮಾದಲ್ಲಿ ಬೌನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಫ್ಯಾಷನ್, ಹೀರೋಯಿನ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಮಧುರ್ ಭಂಡಾರ್ ಕರ್ ಅವರೇ ಬಬ್ಲಿ ಬೌನ್ಸರ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಮಹಿಳಾ ಬೌನ್ಸರ್ ಬಬ್ಲಿ ಕುರಿತು ಚಿತ್ರದ ಕಥೆ ಇದಾಗಿದ್ದು ಬೌನ್ಸರ್ ಗಳ ನಗರಿ ಎಂದೇ ಖ್ಯಾತಿ ಪಡೆದಿರುವ ಉತ್ತರ ಭಾರತದ ಅಸೋಲಾ ಫತೇಪುರದಲ್ಲಿ ಚಿತ್ರದ ಕಥೆ ಸಾಗಲಿದೆ.


“ಬಬ್ಲಿ ಬೌನ್ಸರ್ ಸಿನಿಮಾದ ಕಥೆ ಕೇಳುತ್ತಿದ್ದಂತೆ ಖುಷಿಯಾಯಿತು. ಅದೇ ಕಾರಣದಿಂದ ನಟಿಸುವ ಅವಕಾಶ ಸಿಕ್ಕಿದಾಗ ಬಹುಬೇಗನೇ ಒಪ್ಪಿಕೊಂಡೆ. ಮಧುರ್ ಭಂಡಾರ್ ಕರ್ ಮಹಿಳಾ ಪ್ರಧಾನ ಚಿತ್ರಗಳನ್ನು ನಿರ್ದೇಶಿಸುವಲ್ಲಿ ದೊಡ್ಡ ಹೆಸರು. ಇದೇ ಮೊದಲ ಬಾರಿಗೆ ಮಹಿಳಾ ಬೌನ್ಸರ್ ಒಬ್ಬಳ ಕಥೆ ಸಾಗಲಿದ್ದು, ನಾನು ಮಹಿಳಾ ಬೌನ್ಸರ್ ಗಳಾಗಿ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ” ಎಂದು ಹೇಳುತ್ತಾರೆ ತಮನ್ನಾ ಭಾಟಿಯಾ.