- February 26, 2022
ಜೇಮ್ಸ್ ಹಾರೈಸಲು ಒಂದಾಗಲಿದ್ದಾರೆ ಎರಡು ಚಿತ್ರರಂಗದ ಗಣ್ಯರು

ಕನ್ನಡಿಗರ ಮನದಲ್ಲೇ ಮನೆಮಾಡಿಕೊಂಡಿರೋ ಕರುನಾಡ ಯುವರತ್ನ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ “ಜೇಮ್ಸ್” ಇದೇ ಮಾರ್ಚ್ 17ರಂದು ಬೆಳ್ಳಿತೆರೆಯನ್ನ ಬೆಳಗಲಿರೋ ವಿಷಯ ನಮಗೆಲ್ಲರಿಗೂ ಗೊತ್ತಿರುವಂತದ್ದೇ. ನಮ್ಮನ್ನಗಲಿದ್ದರೂ ನಮ್ಮೊಳಗೇ ಜೀವಿಸುತ್ತಿರೋ ಅಪ್ಪುವನ್ನ ಕೊನೆಯ ಬಾರಿ ಹೊಸದೊಂದು ರೂಪದಲ್ಲಿ ಕಣ್ತುಂಬಿಸಿಕೊಳ್ಳಲು ನಾವೆಲ್ಲರೂ ಹಾತೊರೆದು ಕಾಯುತ್ತಿದ್ದೇವೆ. ಚಿತ್ರತಂಡದವರೂ ಸಹ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಲ್ಲ ತರನಾದ ತಯಾರಿ ನಡೆಸುತ್ತಲೇ ಇದ್ದಾರೆ. ಇದೀಗ “ಜೇಮ್ಸ್” ಬಂಧುಗಳಿಂದ ಚಿತ್ರದ ಬಿಡುಗಡೆ-ಪೂರ್ವ ಕಾರ್ಯಕ್ರಮದ ಬಗೆಗಿನ ಸಂತಸ ತುಂಬೋ ವಿಷಯಗಳು ಹೊರಹೊಮ್ಮುತ್ತಿವೆ.

ಮಾರ್ಚ್ 6ರಂದು ಹೊಸಪೇಟೆಯಲ್ಲಿ ಅದ್ದೂರಿಯಾಗಿ ನಡೆಯಲಿರೋ ಈ “ಜೇಮ್ಸ್” ಹಬ್ಬದಲ್ಲಿ ಕನ್ನಡಿಗರ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಟೋಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ರಂಗವನ್ನ ರಂಗೇರಿಸಲಿದ್ದಾರೆ. ಇವರಿಗೆ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಕೂಡ ಸಾಥ್ ನೀಡಲಿದ್ದಾರೆ. ಇವರೊಂದಿಗೆ ಚಿತ್ರರಂಗದ ಇತರ ಗಣ್ಯರು ಸಹ ಸೇರೋ ಸಾಧ್ಯತೆಯಿದೆ. ಒಟ್ಟಿನಲ್ಲಿ ಕನ್ನಡದ ಪವರ್ ಸ್ಟಾರ್ ಗೆ ಹಾಗೂ ಅವರನ್ನ ಬೆಟ್ಟದಷ್ಟು ಪ್ರೀತಿಸೋ ಅವರ ಅಭಿಮಾನಿಗಳಿಗೆ ಹೃದಯತುಂಬುವಷ್ಟು ಸಂತೋಷ ನೀಡಲು ಚಿತ್ರತಂಡ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಲಿದೆ.


ಇದಲ್ಲದೆ ತಮ್ಮ ಚಿತ್ರದ ಮೊದಲ ಹಾಡೊಂದನ್ನು ಮಹಾಶಿವರಾತ್ರಿಯ ಪ್ರಯುಕ್ತ ಮಾರ್ಚ್ ಮೊದಲ ದಿನದಂದು ಬಿಡುಗಡೆಗೊಳಿಸಲು “ಜೇಮ್ಸ್” ಚಿತ್ರತಂಡ ಸಜ್ಜಾಗಿ ನಿಂತಿದೆ. ಅಪ್ಪು ಅಭಿಮಾನಿಗಳಿಗೆ ಅನ್ನುವುದಕ್ಕಿಂತ ಸಮಸ್ತ ಕನ್ನಡಿಗರಿಗೆ ಮಾರ್ಚ್ ತಿಂಗಳು ಮಹದಾನಂದದ ಮಹಾಪೂರ ನೀಡಲು “ಜೇಮ್ಸ್” ಕಾಯುತ್ತಿದ್ದಾರೆ.
