- February 18, 2022
ಬೆಂಗಳೂರಿನ ರಸ್ತೆ ಇನ್ನಾಗಲಿದೆ “ಪುನೀತ”

ಹಲವಾರು ಸಾಧನೆಗಳಿಗೆ, ಸಾಧಕರಿಗೆ ದಾರಿದೀಪವಾಗಿರೋ ಯುವರತ್ನ ಪುನೀತ್ ರಾಜಕುಮಾರ್ ಅವರ ಹೆಸರನ್ನು ಬೆಂಗಳೂರಿನ ದಾರಿಯೊಂದಕ್ಕೆ ಇಡೋ ಯೋಜನೆಯನ್ನ ‘ಬಿಬಿಎಂಪಿ’ ಹಾಕಿಕೊಂಡಿದೆ. ತಮ್ಮ ಈ ಯೋಜನೆಯನ್ನ ಸ್ವತಃ ‘ಬಿಬಿಎಂಪಿ’ ಜನರ ಎದುರಿಗಿಟ್ಟಿದೆ.

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)’ ಹೇಳಿಕೊಂಡಂತೆ ಮೈಸೂರ್ ರಸ್ತೆಯಲ್ಲಿರೋ ನಾಯಂಡಳ್ಳಿ ಜಂಕ್ಷನ್ ನಿಂದ ಬನ್ನೇರ್ಘಟ್ಟ ರಸ್ತೆಯಲ್ಲಿರೋ ವೆಗ ಸಿಟಿ ಮಾಲ್ ವರೆಗಿನ ರಸ್ತೆಯನ್ನು ಪುನೀತ್ ರಾಜಕುಮಾರ್ ಹೆಸರಿನಿಂದ ನಾಮಕರಣ ಮಾಡಲಾಗುವುದು. ಬಿಬಿಎಂಪಿಯ ಈ ನಿರ್ಧಾರದಿಂದ ಅಭಿಮಾನಿಗಳು ಸಂತುಷ್ಟರಾಗುವುದಲ್ಲಿ ಅನುಮಾನವಿಲ್ಲ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿರೋ ರಸ್ತೆಯೊಂದನ್ನು ಅಲ್ಲಿನ ಪುನೀತ್ ಅಭಿಮಾನಿಗಳೇ ಸ್ವಯಂಪ್ರೇರಿತರಾಗಿ ‘ಪುನೀತ್ ರಾಜಕುಮಾರ್ ರಸ್ತೆ’ ಎಂದು ಘೋಷಣೆ ಮಾಡಿದ್ದರು. ಇದೀಗ ಆ ಸಾಲಿಗೆ ಬೆಂಗಳೂರಿನ ರಸ್ತೆಯೊಂದು ಸೇರ್ಪಡೆಯಾಗುತ್ತಿರುವುದೇ ಸಂತಸ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೊಂದಿರೋ ಅಭಿಮಾನಿ ಬಳಗಕ್ಕೆ ಸಾಟಿಯೇ ಇಲ್ಲ. ಪುನೀತ್ ನಮ್ಮನ್ನೆಲ್ಲ ಅಗಲಿದಾಗ ಮರುಗಿದ ಜನಸಾಗರಕ್ಕೆ ಲೆಕ್ಕವೇ ಇಲ್ಲ. ಅಂತಹ ಅಪೂರ್ವ, ಅದ್ಭುತ ವ್ಯಕ್ತಿತ್ವ ಅವರದ್ದು. ಇದೀಗ ಬಿಬಿಎಂಪಿಯ ಈ ನಡೆಯಿಂದ ಪುನೀತ್ ರ ನೆನಪಿಗೆ ಇನ್ನೊಂದಿಷ್ಟು ಶಕ್ತಿ ಬಂದಂತಾಗಿದೆ.

