- February 28, 2022
ಹೊಟ್ಟೆ ಹುಣ್ಣಾಗಿಸದಿದ್ದರೂ ನಗಿಸೋ ‘ಓಲ್ಡ್ ಮಂಕ್’

“ದೊಡ್ಡ flashback ಗೆ ಟೈಮ್ ಇಲ್ಲ”, “ವಿಲನ್ ಬರ್ತಿದಾನೆ ಮ್ಯೂಸಿಕ್ ಹಾಕು” ಈ ರೀತಿಯ ಹಲವಾರು ಸಣ್ಣ ಪುಟ್ಟ ಸಂಭಾಷಣೆಗಳು ಥೀಯೇಟರ್ ನಿಂದ ಹೊರಬಂದಮೇಲೂ ನಮ್ಮ ತಲೆಯಲ್ಲಿ ಗುನುಗುಟ್ಟುತಿತ್ತು. ಕಾರಣ ಶ್ರೀನಿ ಅಕಾ ಎಂ. ಜಿ. ಶ್ರೀನಿವಾಸ್ ನಿರ್ದೇಶನದ ‘ಓಲ್ಡ್ ಮಂಕ್’ ಚಿತ್ರ. ಎಣ್ಣೆ ಬ್ರಾಂಡಿನ ಹೆಸರಿನ ಈ ಚಿತ್ರ ಕಿಕ್ ಅಂತೂ ಖಂಡಿತವಾಗಿ ಕೊಟ್ಟಿತ್ತು. ಆದರೆ ಶ್ರೀನಿ ಅಭಿಮಾನಿಗಳಿಗೆ ತಕ್ಕಮಟ್ಟಿನ ನಿರಾಸೆ ಆಗಿದ್ರು ಆಗಿರಬಹುದು.

ಶ್ರೀನಿ ಕನ್ನಡದ ಅತಿ ಚಾಣಾಕ್ಷ ಯುವನಿರ್ದೇಶಕರಲ್ಲಿ ಒಬ್ಬರು. ಇವರ ಕ್ರಿಯೇಟಿವ್ ಉಪಾಯಗಳಿಗೆ ಇವರೇ ಸಾಟಿ. ನಿರ್ದೇಶಿಸಿದ ಮೂರನೇ ಚಿತ್ರದಲ್ಲೇ ತನ್ನದೇ ಒಂದು ಅಭಿಮಾನಿ ಬಳಗವನ್ನ ಪಡೆದ ನಿರ್ದೇಶಕ. ಇವರ ನಿರ್ದೇಶನದ ನಾಲ್ಕನೇ ಚಿತ್ರ “ಓಲ್ಡ್ ಮಂಕ್” ಸದ್ಯ ಚಿತ್ರಮಂದಿರಗಳನ್ನ ಸೇರಿದೆ. ಕಾಮಿಡಿ, ಒಂದಿಷ್ಟು ರೋಮ್ಯಾನ್ಸ್, ಒಂದಿಷ್ಟು ರಿವೆಂಜ್ ಹೊತ್ತುತಂದಿರೋ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಪ್ರಶಂಸೆಗಳು ಓಡಿಬರುತ್ತಿವೆ.ದೇವಲೋಕದ ನಾರದರಿಂದ ಆರಂಭವಾಗೋ ಕಥೆ ಭೂಲೋಕದ ಅಪ್ಪಣ್ಣನಿಂದ ಮುಂದುವರೆಯುತ್ತೆ. ಚಿತ್ರದ ಟ್ರೈಲರ್ ನೋಡಿದವರಿಗೆ ಕಥೆಯ ಸುಮಾರು ಸುಳಿವುಗಳು ಸಿಕ್ಕಿರುತ್ತವೆ. ಅಪ್ಪಣ್ಣ (ಶ್ರೀನಿ) ಆಗಿ ಭೂಲೋಕದಲ್ಲಿ ಜನಿಸೋ ಶಾಪಗ್ರಸ್ಥ ನಾರದರ ಕಥೆ ಏನಾಗುತ್ತದೆ ಅನ್ನುವುದೇ ಚಿತ್ರ. ಪಕ್ಕ ಕಾಮಿಡಿಗಾಗಿ ಮೀಸಲಿಟ್ಟ ಸನ್ನಿವೇಶಗಳಿಗೆ ಸಾಥ್ ಕೊಟ್ಟಿದ್ದು ಪ್ರಸನ್ನ ವಿ ಎಂ ಅವರ ಪಂಚಿಂಗ್ ಸಂಭಾಷಣೆಗಳು. ಅಲ್ಲದೇ ಗಿಚ್ಚ ಗಿಲಿ ಗಿಲಿ ಹಾಡು ಪ್ರೇಕ್ಷಕರನ್ನ ತಮ್ಮ ಕುರ್ಚಿಯಲ್ಲಿ ಭದ್ರವಾಗಿ ಕೂರಿಸಿತ್ತು.

ನಾಯಕ ನಾಯಕಿಯರಾಗಿ ಶ್ರೀನಿ ಹಾಗೂ ಅದಿತಿ ಪ್ರಭುದೇವ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿಕೊಟ್ಟಿದ್ದಾರೆ. ನಾಯಕನ ಸ್ನೇಹಿತ ಹಾಗೂ ತಂದೆಯಾಗಿ ನಟಿಸಿರೋ ಸುಜಯ್ ಶಾಸ್ತ್ರೀ ಹಾಗೂ ಎಸ್ ನಾರಾಯಣ್ ರ ನಟನೆಯ ಬಗ್ಗೆ ಮಾತನಾಡುವಂತಿಲ್ಲ. ಗಂಭೀರ ಪರಿಸ್ಥಿತಿಗಳಲ್ಲೂ ತಮ್ಮ ತರಲೆ ಡೈಲಾಗ್ ಗಳಿಂದ ನಗು ತರಿಸೋ ರಣ್ವೀರ್ ಆಗಿ ಸುಜಯ್ ಶಾಸ್ತ್ರೀಯವರನ್ನ ಮೆಚ್ಚಿಕೊಳ್ಳದವರಿಲ್ಲ. ನಾಯಕಿಯ ತಂದೆಯಾಗಿ ಸಿಹಿ ಕಹಿ ಚಂದ್ರು ಕೂಡ ತಕ್ಕಮಟ್ಟಿಗೆ ನಗು ತರಿಸುತ್ತಾರೆ.

ಒಟ್ಟಿನಲ್ಲಿ ಕಾಮಿಡಿ ಗೆ ಹೆಚ್ಚು ಒತ್ತು ಕೊಟ್ಟು ಮಾಡಿರೋ ಪಕ್ಕ ಫ್ಯಾಮಿಲಿ ಎಂಟರ್ಟೈನರ್ ಚಿತ್ರ ಇದು. ‘ಟೋಪಿವಾಲ’ ‘ಬೀರಬಲ್’ ಅಂತಹ ಚಿತ್ರಗಳಲ್ಲಿ ಕಥೆಮೂಲಕವೇ ಪ್ರೇಕ್ಷಕರನ್ನ ಹಿಡಿದಿಟ್ಟುಕೊಂಡಿದ್ದ ನಿರ್ದೇಶಕ ಶ್ರೀನಿ ‘ಓಲ್ಡ್ ಮಂಕ್’ನಲ್ಲಿ ಕಾಣಲಿಲ್ಲ. ‘ಬೀರಬಲ್’ ನ ಕಥೆ ನೋಡಿ ಆಕಾಂಕ್ಷೆಗಳನಿಟ್ಟುಕೊಂಡು ಈ ಸಿನೆಮಾ ಗೆ ಬಂದವರಿಗೆ ಕೊಂಚ ನಿರಾಸೆ ಆಗಿರಬಹುದು. ಜನರನ್ನ ನಗಿಸೋ ಕಡೆಗೆ ಹೆಚ್ಚು ಕಾಳಜಿ ತೋರಿದ ಶ್ರೀನಿ ಕಥೆಗೆ ಇನ್ನಷ್ಟು ಒತ್ತು ಕೊಟ್ಟಿದ್ದರೆ ಚೆನ್ನಾಗಿತ್ತು ಅನಿಸಿತ್ತು. ಕುಟುಂಬದ ಜೊತೆ ಚಿಂತೆಗಳನ್ನೆಲ್ಲ ದೂರಕಿಟ್ಟು, ಒಂದಷ್ಟು ಆರಾಮಾಗಿ ನಕ್ಕು ಬರಬಹುದಾದಂತ ಒಂದೊಳ್ಳೆ ಚಿತ್ರ ‘ಓಲ್ಡ್ ಮಂಕ್’
