- February 28, 2022
ಬೇಬಿ ಬಂಪ್ ಫೋಟೋಶೂಟ್ ಮೂಲಕ ಮನ ಸೆಳೆಯುತ್ತಿದ್ದಾರೆ ಅಮೂಲ್ಯ

ನಟಿ ಅಮೂಲ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಕೆಲ ದಿನಗಳ ಹಿಂದಷ್ಟೇ ಅದ್ದೂರಿ ಸೀಮಂತ ಶಾಸ್ತ್ರ ನಡೆದಿತ್ತು. ಕುಟುಂಬಸ್ಥರು, ಬಂಧು ಮಿತ್ರರು ಸೇರಿ ಇತ್ತೀಚೆಗಷ್ಟೇ ಈ ಚೆಂದುಳ್ಳಿ ಚೆಲುವೆಯ ಸೀಮಂತ ನಡೆಸಿದ್ದರು. ತದ ನಂತರ ಸ್ಯಾಂಡಲ್ ವುಡ್ ಮಂದಿಯೂ ಕೂಡಾ ಜೊತೆ ಸೇರಿ ಮಗದೊಂದು ಸೀಮಂತ ನೆರವೇರಿಸಿದ್ದರು. ಇಂತಿಪ್ಪ ಅಮೂಲ್ಯ ಈಗ ಮತ್ತೆ ಗಮನಸೆಳೆಯುತ್ತಿದ್ದಾರೆ. ಅದಕ್ಕೆ ಕಾರಣ ಫೋಟೋಶೂಟ್.

ಈ ಮೊದಲು ಮೆಟರ್ನಿಟಿ ಫೋಟೋ ಶೂಟ್ ಮಾಡಿಸಿಕೊಂಡಿರುವ ಅಮೂಲ್ಯ ಇತ್ತೀಚೆಗೆ ಮತ್ತೊಂದು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಮೂಲ್ಯ ಅವರ ಫೋಟೋಗಳು ಸುಂದರವಾಗಿದ್ದು ಅಭಿಮಾನಿಗಳ ಮನಗೆದ್ದಿದೆ. ನೀಲಿ ಬಣ್ಣದ ಡ್ರೆಸ್ ಧರಿಸಿ ನೀರಿನ ನಡುವೆ ಹೂವಿನ ಉಯ್ಯಾಲೆಯಲ್ಲಿ ಕುಳಿತು ಪತಿ ಜಗದೀಶ್ ಅವರು ಜೊತೆ ಪೋಸ್ ಕೊಟ್ಟಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ತಾವು ತಾಯಿ ಆಗುತ್ತಿರುವ ಕುರಿತು ಹಂಚಿಕೊಂಡಿದ್ದರು. ಪತಿ ಜಗದೀಶ್ ಜೊತೆ ಫೋಟೋಶೂಟ್ ಮಾಡಿಸಿ ಈ ಸಂತಸದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅಮೂಲ್ಯ ನಟಿಯಾಗಿಯೂ ಗುರುತಿಸಿಕೊಂಡಾಕೆ. ಜಗದೀಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಂತರ ಬಣ್ಣದ ಲೋಕದಿಂದ ದೂರ ಉಳಿದಿರುವ ಈಕೆ ಇದೀಗ ಮುದ್ದು ಕಂದನ ನಿರೀಕ್ಷೆಯಲ್ಲಿದ್ದಾರೆ.
