- January 23, 2022
ಕಥೆಯಲ್ಲಿ ಜೀವಿಸಿದ ಸಾರ್ಥಕತೆಯೊಂದಿಗೆ ಮನದಲ್ಲಿ ಉಳಿವೆ – ಇಂತಿ ನಿಮ್ಮ ಮುದ್ದುಲಕ್ಷ್ಮಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಮುದ್ದುಲಕ್ಷ್ಮಿಯು ಯಶಸ್ವಿ ನಾಲ್ಕನೇ ವರ್ಷ ಪೂರೈಸಿದೆ. ಮನೋಜ್ಞ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಈ ಧಾರಾವಾಹಿ ಸಾವಿರ ಸಂಚಿಕೆ ಪೂರೈಸಿದ್ದು ಇದೇ ಸೋಮವಾರದಿಂದ ಮುದ್ದುಲಕ್ಷ್ಮಿಯ ಮುದ್ದುಮಣಿಗಳು ಎನ್ನುವ ಹೊಸ ಅಧ್ಯಾಯ ಕೂಡಾ ಆರಂಭವಾಗಲಿದೆ. ಇದರ ಜೊತೆಗೆ ಮುದ್ದು ಹಾಗೂ ದೃವಂತ್ ಅಧ್ಯಾಯ ಮುಗಿಯುತ್ತಿರುವುದು ವೀಕ್ಷಕರಿಗೆ ಕೊಂಚ ಬೇಸರ ತಂದಿದೆ.

ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿ ಆಲಿಯಾಸ್ ಮುದ್ದು ಆಗಿ ನಟಿಸುತ್ತಿರುವ ಅಶ್ವಿನಿ ಅವರು ನಾಲ್ಕು ವರ್ಷದ ತನ್ನ ಸುದೀರ್ಘ ಪಯಣ ಕೊನೆಗೊಳ್ಳುತ್ತಿರುವ ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೊನೆಯ ಸಂಚಿಕೆಯ ಶೂಟಿಂಗ್ ವಿಡಿಯೋದ ತುಣುಕೊಂದನ್ನು ಹಂಚಿಕೊಂಡಿರುವ ಅಶ್ವಿನಿ ” ಕಥೆಯಲ್ಲಿ ಜೀವಿಸಿದ ಸಾರ್ಥಕತೆಯೊಂದಿಗೆ ಮನದಲ್ಲಿ ಉಳಿವೆ – ಇಂತಿ ನಿಮ್ಮ ಮುದ್ದುಲಕ್ಷ್ಮಿ” ಎಂದು ಬರೆದುಕೊಂಡಿದ್ದಾರೆ.

ಇನ್ನು ಪಾತ್ರದ ಬಗ್ಗೆ ಮಾತನಾಡುತ್ತಾ” ನನ್ನ ಜೀವನದಲ್ಲಿ ಮುದ್ದುಲಕ್ಷ್ಮಿ ಧಾರಾವಾಹಿಯು, ಲಕ್ಷ್ಮಿ ಪಾತ್ರವು ಬಹು ದೊಡ್ಡ ಭಾಗವಾಗಿದೆ ಎಂದರೆ ತಪ್ಪಾಗಲಾರದು. ಲಕ್ಷ್ಮಿ ಪಾತ್ರ ನನ್ನನ್ನು ಸಾಕಷ್ಟು ಗಟ್ಟಿಗೊಳಿಸಿದೆ. ಮಾತ್ರವಲ್ಲ ನನ್ನೊಳಗಿನ ಆತ್ಮವಿಶ್ವಾಸವನ್ನು ಇದು ಇಮ್ಮಡಿಗೊಳಿಸಿದೆ. ನಿಮ್ಮೆಲರ ಹಾರೈಕೆಯಿಂದ ಮುದ್ದುಲಕ್ಷ್ಮಿ ಯಶಸ್ವಿ ನಾಲ್ಕು ವರ್ಷ ಪೂರೈಸಿದೆ. ಇದೀಗ ಹೊಸ ಅಧ್ಯಾಯ ಆರಂಭವಾಗಲಿದ್ದು ನಿಮ್ಮೆಲ್ಲರ ಹಾರೈಕೆ ಮುದ್ದುಲಕ್ಷ್ಮಿ ತಂಡದ ಮೇಲಿರಲಿ” ಎನ್ನುತ್ತಾರೆ ಅಶ್ವಿನಿ.

ರಾಜ್ ಮ್ಯೂಸಿಕ್ ಚಾನೆಲ್ ನ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟಿದ್ದ ಅಶ್ವಿನಿ ಅನುರಾಗ ಸಂಗಮ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಜಿಗಿದರು. ಅನುರಾಗ ಸಂಗಮ ಧಾರಾವಾಹಿಯಲ್ಲಿ ಛಾಯಾ ಪಾತ್ರಧಾರಿಯಾಗಿ ನಟಿಸುವ ಅವಕಾಶ ಪಡೆದ ಈಕೆ ಬರೋಬ್ಬರಿ ಒಂದು ವರ್ಷಗಳ ಕಾಲ ಆ ಪಾತ್ರಕ್ಕೆ ಜೀವ ತುಂಬಿದರು.

ಮುಂದೆ ಕುಲವಧು ಧಾರಾವಾಹಿಯಲ್ಲಿ ಖಳನಾಯಕಿ ಶಶಿಕಲಾ ಆಗಿ ಅಬ್ಬರಿಸಿದ್ದ ಅಶ್ವಿನಿ ಪೌರಾಣಿಕ ಧಾರಾವಾಹಿ ಗಿರಿಜಾ ಕಲ್ಯಾಣದಲ್ಲಿ ನಟಿಸಿದ್ದರು. ಮೂರು ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ್ದ ಅಶ್ವಿನಿ ಅವರನ್ನು ಜನ ಗುರುತಿಸಿದ್ದು, ಅವರಿಗೆ ಜನಪ್ರಿಯತೆ ನೀಡಿದ್ದು ಮುದ್ದುಲಕ್ಷ್ಮಿ ಪಾತ್ರ. ನಾಲ್ಕು ವರ್ಷದ ಬಳಿಕ ಇದೀಗ ಅವರು ಪಾತ್ರಕ್ಕೆ ವಿದಾಯ ಹೇಳಿದ್ದು ಮತ್ತೆ ಹೊಸ ಧಾರಾವಾಹಿಯ ಮೂಲಕ ಮರಳಿ ಬರುತ್ತಾರಾ ಎಂದು ಕಾದು ನೋಡಬೇಕಾಗಿದೆ.
