- January 31, 2022
ತೆಲುಗು ಸಿನಿರಂಗಕ್ಕೆ ಹಾರಿದ ಕಿರುತೆರೆಯ ಜಾನಕಿ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಧಾರಾವಾಹಿಯಲ್ಲಿ ನಾಯಕಿ ಜಾನಕಿ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಲೋಕಕ್ಕೆ ಪರಿಚಿತರಾದ ಚಿಕ್ಕಮಗಳೂರಿನ ಚೆಲುವೆ ಗಾನವಿ ಲಕ್ಷ್ಮಣ್ ಇದೀಗ ಹಿರಿತೆರೆಯಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.

ಮಗಳು ಜಾನಕಿ ಧಾರಾವಾಹಿಯ ನಂತರ ಹಿರಿತೆರೆಯಿಂದ ಅವಕಾಶ ಪಡೆದ ಗಾನವಿ ಲಕ್ಷ್ಮಣ್ ಮೊದಲು ಬಣ್ಣ ಹಚ್ಚಿದ ಸಿನಿಮಾ ಗಿರೀಶ್ ಕುಮಾರ್ ನಿರ್ದೇಶನದ ಭಾವಚಿತ್ರ. ತದ ನಂತರ ರಿಷಬ್ ಶೆಟ್ಟಿ ನಿರ್ದೇಶನದ ಹೀರೋ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಸುವರ್ಣಾವಕಾಶ ಪಡೆದಿರುವ ಗಾನವಿ ನಾಥೂರಾಮ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

ಮುಂದೆ ವೇದ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಂಡಿರುವ ಕಾಫಿ ನಾಡಿನ ಚೆಲುವೆ ಗಾನವಿ ಲಕ್ಷ್ಮಣ್ ಕಿರುಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೈಕಾಲಜಿ ಉಪನ್ಯಾಸಕ ಮತ್ತು ಲೈಂಗಿಕ ವರ್ಕರ್ ನಡುವೆ ನಡೆಯುವ ಕಥೆಯನ್ನೊಳಗೊಂಡ ಗುಟ್ರುಗೂ ಕಿರುಚಿತ್ರದಲ್ಲಿ ಲೈಂಗಿಕ ವರ್ಕರ್ ಆಗಿ ಗಾನವಿ ಕಾಣಿಸಿಕೊಂಡಿದ್ದರು. ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಆ ಕಿರುಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಜೊತೆಗೆ ಗಾನವಿ ನಟನೆಯೂ ಕೂಡಾ!

ಒಂದಾದ ಮೇಲೆ ಒಂದರಂತೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಿರುವ ಗಾನವಿ ಇದೀಗ ಪರಭಾಷೆಯ ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸಲು ತಯಾರಾಗಿದ್ದಾರೆ. ಅಜಯ್ ಕುಮಾರ್ ಗೌನಿ ನಿರ್ದೇಶನದ ಗೆಲವು ಸಿನಿಮಾ ರುದ್ರಾಂಗಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಗಾನವಿ.

“ತೆಲುಗು ಇಂಡಸ್ಟ್ರಿ ಗೆ ನಾನು ಹೊಸಬಳು. ಮೊದಲ ಬಾರಿಗೆ ಟೈಟಲ್ ರೋಲ್ ನಲ್ಲಿ ನಟಿಸುವ ಅವಕಾಶ ದೊರೆತಾಗ ನಾನು ನರ್ವಸ್ ಆಗಿದ್ದೆ. ಆದರೆ ಶೂಟಿಂಗ್ ಶುರುವಾದ ನಾನು ಈ ಇಂಡಸ್ಟ್ರಿ ಗೆ ಹೊಸಬಳು ಎಂದೆನಿಸಲಿಲ್ಲ. ನಾನು ಕೂಡಾ ಇವರಲ್ಲಿ ಒಬ್ಬಳು ಎನ್ನುವ ಅನುಭವ ಬಂದಿತು. ರುದ್ರಾಂಗಿ ಫಿಮೇಲ್ ಒರಿಯೆಂಟೆಡ್ ಸಿನಿಮಾವಾಗಿದ್ದು, ನಾನು ರುದ್ರಾಂಗಿ ಆಗಿ ಕಾಣಿಸಿಕೊಳ್ಳಲಿದ್ದೇನೆ” ಎನ್ನುತ್ತಾರೆ ಕಾಫಿ ನಾಡಿನ ಕುವರಿ.

