• February 11, 2022

ಜೇಮ್ಸ್ ನ ‘ಪವರ್’ ಝಲಕ್ ಇದೀಗ ಅಭಿಮಾನಿಗಳ ಕಣ್ಮುಂದೆ

ಜೇಮ್ಸ್ ನ ‘ಪವರ್’ ಝಲಕ್ ಇದೀಗ ಅಭಿಮಾನಿಗಳ ಕಣ್ಮುಂದೆ

ಇಂದು, ಅಂದರೆ ಫೆಬ್ರವರಿ 11ರಂದು ಕನ್ನಡದ ಯುವರತ್ನ ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿರುವ ಕೊನೆಯ ಚಿತ್ರ ಜೇಮ್ಸ್ ನ ಟೀಸರ್ ಬಿಡುಗಡೆಯಾಗಿದೆ. ಬೆಳ್ಳಿಪರದೆಯಲ್ಲಿ ಅಪ್ಪುವನ್ನ ನೋಡೋ ಪ್ರೇಕ್ಷಕರಿಗೆ ಅತಿಹೆಚ್ಚು ಸಂತೃಪ್ತಿ ನೀಡಬೇಕೆಂಬ ಚಿತ್ರತಂಡದ ಪ್ರಯತ್ನ ಚಿತ್ರದ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ.
ಬಹದ್ದೂರ್ ಖ್ಯಾತಿಯ ಚೇತನ್ ಕುಮಾರ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶರತ್ ಕುಮಾರ್, ಶ್ರೀಕಾಂತ್ ರಂತಹ ದೊಡ್ಡದೊಡ್ಡ ಹೆಸರುಗಳು ತಾರಗಾಣದಲ್ಲಿವೆ. ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ತುಂಬಿದ್ದು, ಕಿಶೋರ್ ಪ್ರೊಡಕ್ಷನ್ಸ್ ಸಿನಿಮಾದ ಹಣಕಾಸಿನ ವ್ಯವಹಾರ ನೋಡಿಕೊಳ್ಳಲಿದೆ.
ಇದು ಒಂದು ಸಂಪೂರ್ಣ ಕಮರ್ಷಿಯಲ್-ಆಕ್ಷನ್ ಚಿತ್ರ. ಸಂತೋಷ್ ಅನ್ನೋ ಪಾತ್ರಕ್ಕೆ ಪುನೀತ್ ಜೀವತುಂಬಿದ್ದು, ಕಥೆ ಆ ಪಾತ್ರದ ಸುತ್ತಲೇ ಸುತ್ತುತ್ತದಂತೆ. ಇದೊಂದು ಪಾನ್-ಇಂಡಿಯನ್ ಸಿನಿಮಾ ಆಗಿರಲಿದ್ದು, ಕನ್ನಡ ಮಾತ್ರವಲ್ಲದೆ ತಮಿಳ್, ತೆಲುಗು ಮಲಯಾಳಂ ಹಾಗೂ ಹಿಂದಿಯಲ್ಲಿ ಕೂಡ ಸಿನಿಮಾ ತೆರೆಮೇಲೆ ಬರಲಿದೆ. ಅಪ್ಪು ಜೀವತುಂಬಿರೋ ಪಾತ್ರಕ್ಕೆ ಶಿವಣ್ಣ ಸ್ವರ ತುಂಬಿರೋದು ಸಿನಿಮಾದ ಇನ್ನೊಂದು ವಿಶೇಷತೆ.
ಒಟ್ಟಿನಲ್ಲಿ ಕೊನೆಯ ಭಾರಿ ಕರುನಾಡ ರಾಜರತ್ನನನ್ನ ನಾಯಕನಾಗಿ ತೆರೆಮೇಲೆ ಕಂಡು ಕಣ್ತುಂಬಿಸಿಕೊಳ್ಳಲು ಹಾತೊರೆಯುತ್ತಿದ್ದ ಅಭಿಮಾನಿ ಬಳಗಕ್ಕೆ ಟೀಸರ್ ನೋಡಿದ ಮೇಲೆ ಕಾತುರತೆ ಹೆಚ್ಚಾಗುವುದಂತೂ ಖಂಡಿತ. ಜೇಮ್ಸ್ ಚಿತ್ರ ಮಾರ್ಚ್ 17ರಂದು ಬೆಳ್ಳಿತೆರೆಗೆ ಬಣ್ಣ ತುಂಬಲಿದೆ.