- January 29, 2022
ಕ್ವಾರಂಟೈನ್ ದಿನಗಳ ಅನುಭವ ಬಿಚ್ಚಿಟ್ಟ ಅನುಪಮಾ ಗೌಡ

ಕೊರೋನಾ ವೈರಸ್ ಎಂಬ ಮಹಾಮಾರಿಯು ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳನ್ನು ಕಾಡುತ್ತಿದೆ. ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಇದು ಯಾರನ್ನೂ ಕೂಡಾ ಬಿಟ್ಟಿಲ್ಲ. ಕಿರುತೆರೆಯ ನಟಿ, ನಿರೂಪಕಿ ಅನುಪಮಾ ಗೌಡ ಅವರಿಗೂ ಕೆಲದಿನಗಳ ಹಿಂದೆ ಕೊರೋನಾ ಬಾಧಿಸಿದ್ದು 7 ದಿನಗಳ ಕಾಲ ಆಕೆ ಕ್ವಾರಂಟೈನ್ ನಲ್ಲಿದ್ದರು. ಇದೀಗ ಅನುಪಮಾ ಗೌಡ ಚೇತರಿಸಿಕೊಂಡಿದ್ದು ತಮ್ಮ ಕೋವಿಡ್ ದಿನಗಳ ಅನುಭವಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

“ನಟಿ ಅಮೃತಾ ನಾಯ್ಡು ಅವರ ಮಗಳು ಸಮನ್ವಿ ಅವರ ಕಾರ್ಯಕ್ಕೆ ಕೊನೆಯದಾಗಿ ಹೋಗಿದ್ದೆ. ಅದಕ್ಕಿಂತ 5 ದಿನಗಳ ಹಿಂದೆ ಎಪಿಸೋಡ್ ಶೂಟಿಂಗ್ ಇತ್ತು. ಬೇರೆಲ್ಲೂ ಹೋಗಿಲ್ಲ. ಅಲ್ಲಿಂದ ಬಂದು ನಾನು ಓಡಲು ಶುರು ಮಾಡಿದೆ. ದಿನ 10 ಕಿಲೋಮೀಟರ್ ಓಡುವ ನನಗೆ ಆಗ ದಿನ 3 ಕಿಲೋಮೀಟರ್ ಗೆ ಸುಸ್ತು ಅನಿಸಿತು. ನನ್ನ ಲೋವರ್ ಬಾಡಿ ಅಲ್ಲಾಡಿಸುವುದಕ್ಕೆ ಕಷ್ಟ ಆಗಿತ್ತು. ಮನೆಗೆ ಬಂದು ಸ್ನಾನ ಮಾಡಿ ಮಲಗಿದೆ. ಸ್ವಲ್ಪ ಹೊತ್ತಿನಲ್ಲಿ ಚಳಿ ಜ್ವರ ಶುರುವಾಯಿತು. ಜೊತೆಗೆ ತಲೆನೋವು ಕೂಡಾ. ಮೊದಲೇ ನನಗೆ ಮೈಗ್ರೇನ್ ಕೂಡಾ ಇತ್ತು. ಡಾಕ್ಟರ್ ಗೆ ಫೋನ್ ಮಾಡಿ ಕೇಳಿದಾಗ ಸಿಂಪ್ಟಮ್ ಕೇಳಿದ ಅವರು ಕೋವಿಡ್ ಟೆಸ್ಟ್ ಮಾಡಿಸಿ ಎಂದು ಹೇಳಿದರು” ಎನ್ನುತ್ತಾರೆ ಅನುಪಮಾ.

“ನನಗೆ ಅದೆಷ್ಟು ಸುಸ್ತು ಇತ್ತು ಎಂದರೆ ಎದ್ದು ಟೆಸ್ಟ್ ಗೆ ಹೋಗುವಷ್ಟು ಶಕ್ತಿ ಇರಲಿಲ್ಲ. ಜೊತೆಗೆ ಮೂರು ದಿನಗಳ ಹಿಂದೆಯಷ್ಟೇ ನಾನು ಗರ್ಭಿಣಿ ಫ್ರೆಂಡ್ ಮೀಟ್ ಮಾಡಿ ಅವಳ ಜೊತೆ ಟೈಮ್ ಕಳೆದಿದ್ದೆ. ಸಮನ್ವಿ ಕಾರ್ಯಕ್ರಮಕ್ಕೆ ಹೋಗಿದ್ದ ಕಾರಣ ಅಲ್ಲಿಯೂ ಅಮ್ಮಂದಿರನ್ನು ಮೀಟ್ ಮಾಡಿದ್ದೆ. ಆ ಭಯ ಕೂಡಾ ಕಾಡಿತ್ತು. ಇದರ ಜೊತೆಗೆ ಟೆಸ್ಟ್ ಮಾಡುವ ಕಿಟ್ ಅನ್ನು ಆನ್ ಲೈನ್ ನಲ್ಲಿ ತರಿಸಿದೆ. ಕಾಲು ಗಂಟೆಯಲ್ಲಿ ನನಗೆ ಕೋವಿಡ್ ಪಾಸಿಟಿವ್ ಎಂದು ತಿಳಿದಿತ್ತು. ವೈದ್ಯರಿಗೆ ಕಾಲ್ ಮಾಡುವ ಮೊದಲೇ ನಾನು ಈಗಾಗಲೇ ಯಾರನ್ನೆಲ್ಲಾ ಮೀಟ್ ಮಾಡಿದ್ದೇನೋ ಅವರಿಗೆಲ್ಲಾ ಕಾಲ್ ಮಾಡಿ ಹೇಳಿದ್ದೆ. ಮಾತ್ರವಲ್ಲ ಟೆಸ್ಟ್ ಮಾಡುವಂತೆ ಮನವಿ ಮಾಡಿದೆ. ಯಾಕೆಂದರೆ ನನಗೆ ಮಕ್ಕಳ ಚಿಂತೆ ತುಂಬಾ ಕಾಡಿತ್ತು” ಎನ್ನುತ್ತಾರೆ ಅನುಪಮಾ ಗೌಡ.
“ಇನ್ನು ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿಯೂ ಕೂಡಾ ನನಗೆ ಪಾಸಿಟಿವ್ ಇರುವುದು ದೃಢವಾಗಿತ್ತು. ಡಾಕ್ಟರ್ ಮೆಡಿಸಿನ್ ಕೊಟ್ಟು 7 ದಿನ ಕ್ವಾರಂಟೈನ್ ಆಗಲು ಹೇಳಿದರು. ಮೂಗು ಬ್ಲಾಕ್ ಹಾಗೂ ಗಂಟಲು ನೋವಿತ್ತು. ಈಗೆಲ್ಲವೂ ಕಡಿಮೆ ಆಗಿದೆ. ನಾನು ಶೂಟಿಂಗ್ ಎಡಿಂಟ್ ಮಾಡಬೇಕಾಗಿತ್ತು. ಆದರೆ ಅಲ್ಲಿ ಎಲ್ಲರೂ ಚಿಕ್ಕ ಚಿಕ್ಕ ಮಕ್ಕಳು ಇರುವ ಕಾರಣ ಡಾಕ್ಟರ್ 10 ದಿನ ಕ್ವಾರಂಟೈನ್ ಆಗಿ ಅಂಥ ಹೇಳಿದರು. ಅದೇ ಕಾರಣದಿಂದ ಮನೆಯಲ್ಲಿಯೇ ಇದ್ದೆ” ಎಂದು ಕ್ವಾರಂಟೈನ್ ದಿನಗಳ ಬಗ್ಗೆ ಹೇಳುತ್ತಾರೆ ಅನುಪಮಾ.

“ಕೋವಿಡ್ ಬಂದಾಗ ಆರೋಗ್ಯದ ಬಗ್ಗೆ ಅದಷ್ಟೇ ಕಾಳಜಿ ವಹಿಸಿದರೂ ಅದು ಕಡಿಮೆ ಎಂದೆನಿಸುತ್ತದೆ. ಪ್ರತಿದಿನ ಉತ್ತಮ ಆಹಾರ ತೆಗೆದುಕೊಂಡಿದ್ದರೂ ನನ್ನ ಸ್ಟಾಮಿನಾ ಕಡಿಮೆ ಆಗಿತ್ತು. ವಾಕಿಂಗ್ ಜೊತೆಗೆ ಧ್ಯಾನ ತಪ್ಪದೇ ಮಾಡುತ್ತಿದ್ದೆ. ಸಂಗೀತ ಕೇಳುತ್ತಿದ್ದೆ. ಅಷ್ಟೇ ಅಲ್ಲದೇ ಕಾಮಿಡಿ ಸಿನಿಮಾ ಕೂಡಾ ನೋಡುತ್ತಿದ್ದೆ” ಎಂದು ಹೇಳಿರುವ ಅನುಪಮಾ ” ಕೊರೊನಾ ಬಂದ ಸಮಯದಲ್ಲಿ ನನ್ನ ತ್ವಚೆ ಹಾಳಾಗಿತ್ತು. ಆದ ಕಾರಣದಿಂದ ಕೊರೊನಾ ಬಂದ 5 ನೇ ದಿನದಿಂದಲೇ ನಾನು ತ್ವಚೆಯ ಕೇರ್ ಮಾಡಲು ಆರಂಭಿಸಿದ್ದಾರೆ” ಎಂದಿದ್ದಾರೆ.