• February 10, 2022

2022 ರ ಬೆಸ್ಟ್ ಸಿನಿಮಾ ಲವ್ ಮಾಕ್ಟೈಲ್2 – ಅಮೃತ ಅಯ್ಯಂಗಾರ್

2022 ರ ಬೆಸ್ಟ್ ಸಿನಿಮಾ ಲವ್ ಮಾಕ್ಟೈಲ್2 – ಅಮೃತ ಅಯ್ಯಂಗಾರ್

ಸಿಂಹ ಹಾಕಿದ ಹೆಜ್ಜೆ ಸಿನಿಮಾ ಮೂಲಕ ಸಿನಿರಂಗಕ್ಕೆ ಪರಿಚಿತರಾದ ಬ್ಯೂಟಿಫುಲ್ ಬೆಡಗಿ ಅಮೃತಾ ಅಯ್ಯಂಗಾರ್ ಗೆ ಹೆಸರು ತಂದು ಕೊಟ್ಟಿದ್ದು ಜೋಶಿತಾ ಪಾತ್ರ. ಲವದ ಮಾಕ್ಟೈಲ್ ಸಿನಿಮಾದಲ್ಲಿ ಜೋಶಿತಾ ಆಲಿಯಾಸ್ ಜೋ ಆಗಿ ನಟಿಸಿ ಸಿನಿಪ್ರಿಯರ ಮನ ಮನೆ ಗೆದ್ದ ಸುಂದರಿ ಅಮೃತಾ ಅಯ್ಯಂಗಾರ್ ಇದೀಗ ಲವ್ ಮಾಕ್ಟೈಲ್ 2 ರಲ್ಲಿಯೂ ನಟಿಸುತ್ತಿದ್ದಾರೆ.

ಲವ್ ಮಾಕ್ಟೈಲ್ 2 ಬಗ್ಗೆ ಕಾತುರರಾಗಿರುವ ಅಮೃತಾ “ನಾನು ನಿಜವಾಗಿಯೂ ನನ್ನ ಪಾತ್ರದ ಬಗ್ಗೆ ತುಂಬಾ ಹೆದರಿದ್ದೆ. ಸಿನಿಮಾ ರಿಲೀಸ್ ಆಗುವ ಹಿಂದಿನ ರಾತ್ರಿಯವರೆಗೂ ಜನ ನನ್ನ ಪಾತ್ರವನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೋ ಎಂಬ ಭಯ ಇತ್ತು. ಯಾಕೆಂದರೆ ಜೋ ಪಾತ್ರ ನೆಗೆಟಿವ್ ಆಗಿ ಪ್ರಭಾವ ಬೀರಬಹುದೆಂಬ ಭಯ ಕೊಂಚ ಕಾಡಿತ್ತು” ಎನ್ನುತ್ತಾರೆ ಅಮೃತಾ‌.

“ನಾನು ನಟಿ ಎಂಬುದನ್ನು ಬದಿಗಿಟ್ಟು ಪ್ರೇಕ್ಷಕಿಯಾಗಿ ಸಿನಿಮಾ ನೋಡಿದಾಗ ತುಂಬಾ ಸಂತಸಪಟ್ಟೆ. ಆದರೂ ನನಗೆ ಈ ಸಿನಿಮಾ, ಈ ಪಾತ್ರ ಇಷ್ಟೊಂದು ಹಿಟ್ ಆಗಬಹುದೆಂಬ ಯೋಚನೆ ಇರಲಿಲ್ಲ. ಇನ್ನು ಲವ್ ಮಾಕ್ಟೈಲ್ ಸೀಕ್ವೆಲಿನಲ್ಲಿ ಅದೇ ಮುಗ್ಧತೆ ಕಾಣಬಹುದು. ಆದರೆ ಈಗ ಕಾಲ ಸರಿದಿದೆ. ಹೀಗಾಗಿ ಪಾತ್ರದಲ್ಲಿ ಪ್ರಬುದ್ಧತೆಯಿದೆ. ಮೊದಲ ಭಾಗದಲ್ಲಿದ್ದಂತೆ ಹತಾಶೆ ಇಲ್ಲಿಯೂ ಇದೆ” ಎಂದಿದ್ದಾರೆ.

“ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಅದು ಕೂಡಾ ಚೆನ್ನಾಗಿದೆ. ಅದರಲ್ಲಿ ಯಾವುದನ್ನೂ ಬಹಿರಂಗಪಡಿಸಿಲ್ಲ. ಇದು ಭಾವನೆಗಳ ಏರಿಳಿತ. ಫಸ್ಟ್ ಹಾಫ್ ನಗಿಸಿದರೆ , ಸೆಕೆಂಡ್ ಹಾಫ್ ಭಾವನಾತ್ಮಕವಾಗಿ ಇದೆ. ಭಾಗ ಒಂದರಲ್ಲಿ ಕ್ಲೈಮಾಕ್ಸ್ ನಲ್ಲಿ ಇರುವಂತಹ ಮೌನ ಹಾಗೂ ನೋವು ಇದರಲ್ಲಿಯೂ ಇದೆ. ಲವ್ ಸ್ಟೋರಿಗೆ ಸೀಕ್ವೆಲ್ ಮಾಡುವುದು ತುಂಬಾ ಕಷ್ಟ ಹಾಗೂ ದೊಡ್ಡ ಜವಾಬ್ದಾರಿ. ಕೃಷ್ಣ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. 2022ರ ಬೆಸ್ಟ್ ಸಿನಿಮಾ ಆಗಿರಲಿದೆ” ಎಂದಿದ್ದಾರೆ ಅಮೃತಾ ಅಯ್ಯಂಗಾರ್‌.

Leave a Reply

Your email address will not be published. Required fields are marked *