• June 29, 2022

ಆರು ವರ್ಷದ ಹಳೆಯ ನೆನಪನ್ನು ಹಂಚಿಕೊಂಡ ಐಶ್ವರ್ಯಾ ಬಸ್ಪುರೆ

ಆರು ವರ್ಷದ ಹಳೆಯ ನೆನಪನ್ನು ಹಂಚಿಕೊಂಡ ಐಶ್ವರ್ಯಾ ಬಸ್ಪುರೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ ಯಾರೇ ನೀ ಮೋಹಿನಿ ಯಲ್ಲಿ ಖಳನಾಯಕಿ ಮಾಯಾ ಆಗಿ ಅಭಿನಯಿಸಿದ್ದ ಐಶ್ವರ್ಯಾ ಬಸ್ಪುರೆ ನಟನಾ ಪಯಣ ಶುರುವಾಗಿದ್ದು ಮಹಾಸತಿ ಧಾರಾವಾಹಿಯಿಂದ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾಸತಿ ಧಾರಾವಾಹಿ ಆರು ವರ್ಷ ಪೂರೈಸಿತ್ತು. ಮಹಾಸತಿ ಧಾರಾವಾಹಿಯಲ್ಲಿ ವಿಧವೆ ಪಾತ್ರ ಮಾಡುತ್ತಿದ್ದ ಐಶ್ವರ್ಯಾ ಬಸ್ಪುರೆ ಧಾರಾವಾಹಿಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

“ಯಾವತ್ತಿಗೂ ನಾನು ನಟಿಯಾಗುತ್ತೇನೆ, ಬಣ್ಣದ ಲೋಕಕ್ಕೆ ಕಾಲಿಡುತ್ತೇನೆ ಎಂದು ಅಂದುಕೊಂಡವಳಲ್ಲ. ಆದರೆ ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಾನು ನಟಿಯಾಗಬೇಕಾಯಿತು. ಪದವಿಯಲ್ಲಿ ಸೈಕಾಲಜಿ, ಜರ್ನಲಿಸಂ ಹಾಗೂ ಇಂಗ್ಲೀಷ್ ಸಾಹಿತ್ಯ ಓದಿದ್ದ ನನಗೆ ಸೈಕಾಲಿಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಬಯಕೆಯಿತ್ತು. ಸೈಕಾಲಿಜಿಸ್ಟ್ ಆಗಿ ಜನರ ಕಷ್ಟಕ್ಕೆ ಸ್ಪಂದಿಸುವ ಆಸೆಯಿತ್ತು. ಆ ಆಸೆ ನನಗೆ ನಾನು ಐದನೇ ಕ್ಲಾಸ್ ನಲ್ಲಿರುವಾಗಲೇ ಮೂಡಿತ್ತು” ಎನ್ನುತ್ತಾರೆ ಐಶ್ವರ್ಯಾ ಬಸ್ಪುರೆ.

“ಮಹಾಸತಿ ಧಾರಾವಾಹಿಯು ನನ್ನ ಬಣ್ಣದ ಬದುಕಿಗೆ ಮುನ್ನುಡಿ ಬರೆಯಿತು. ಆದರೆ ಕಿರುತೆರೆಗೆ ಕಾಲಿಟ್ಟದ್ದೇ ತಡ ಜನ ನನ್ನನ್ನು ಸ್ವೀಕರಿಸಿದರು. ಅದರಲ್ಲೂ ಹಳ್ಳಿಗಳ ಕಡೆ ಎಲ್ಲಾ ಅದನ್ನು ಪಾತ್ರ ಎಂದರೂ ನಂಬುವುದಿಲ್ಲ. ಮಹಾಸತಿ ಧಾರಾವಾಹಿ ಬೆಳಗಾಂ ನ ಒಂದು ಹಳ್ಳಿಯಲ್ಲಿ ಶೂಟಿಂಗ್ ಆಗುತ್ತಿತ್ತು. ಅದರಲ್ಲಿ ನಾನು ವಿಧವೆಯಾಗಿ ನಟಿಸಿದ್ದೆ. ಆ ಸಮಯದಲ್ಲಿ ಅಲ್ಲಿನ ಜನ ಬಂದು ನನಗೆ ಸಮಾಧಾನ ಮಾಡುತ್ತಿದ್ದರು. ಸಾಂತ್ವನ ಹೇಳುತ್ತಿದ್ದರು. ಅದು ನಿಜವೆಂದ ಭಾವಿಸಿದ ಅವರು ನನ್ನ ಅತ್ತೆಯ ಪಾತ್ರಧಾರಿ ಅದ್ಯಾಕೆ ನನ್ನನ್ನು ಹೀಯಾಳಿಸುತ್ತಿದ್ದಾರೆ ಎಂದು ಕೇಳುತ್ತಿದ್ದರು” ಎಂದು ಹಳೆಯ ನೆನಪನ್ನು ಹಂಚಿಕೊಳ್ಳುತ್ತಾರೆ ಐಶ್ವರ್ಯಾ ಬಸ್ಪುರೆ.

“ಮಹಾಸತಿಯ ಸಮಯದಲ್ಲಿ ನನಗೆ ಜನರ ಭಾವನೆಗಳು ಅರ್ಥವಾಗುತ್ತಿರಲಿಲ್ಲ. ಬೆಂಗಳೂರಿನಂತಹ ಮಹಾನ್ ಸಿಟಿಯಲ್ಲಿ ಹುಟ್ಟಿ ಬೆಳೆದ ನನಗೆ ಹಳ್ಳಿಯ ಜನರ ಭಾವನೆಗೆ ಸ್ಪಂದಿಸಲಾಗಲಿಲ್ಲ. ಅದೆಲ್ಲಾ ನನಗೆ ತಿಳಿದದ್ದು ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ. ಆ ಧಾರಾವಾಹಿಯ ಶೂಟಿಂಗ್ ಸಂಪೂರ್ಣ ಪೇಟೆಯಲ್ಲಿ ಆಯಿತು. ಇಲ್ಲಿ ಶೂಟಿಂಗ್ ಮಾಮೂಲಿ. ಜನರಿಗೂ ಈ ವಾತಾವರಣ ಸಾಮಾನ್ಯ. ಕೇವಲ ಧಾರಾವಾಹಿ ನೋಡುತ್ತಾರೆ, ಪಾತ್ರವನ್ನು ಮೆಚ್ಚಿಕೊಳ್ಳುತ್ತಾರೆ ಅಷ್ಟೇ” ಎಂದು ಹೇಳುತ್ತಾರೆ ಐಶ್ವರ್ಯಾ.

Leave a Reply

Your email address will not be published. Required fields are marked *