• March 7, 2022

ಸ್ಯಾಂಡಲ್ ವುಡ್ ನಲ್ಲಿ ಬೃಂದಾ ಆಚಾರ್ಯ ಅಲೆ ಶುರು…

ಸ್ಯಾಂಡಲ್ ವುಡ್ ನಲ್ಲಿ ಬೃಂದಾ ಆಚಾರ್ಯ ಅಲೆ ಶುರು…

ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಬೃಂದಾ ಆಚಾರ್ಯ ಇದೀಗ ಮಹಿಳಾ ಪ್ರಧಾನ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಜ್ಯೂಲಿಯಟ್ 2 ಎನ್ನುವ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಲು ಬೃಂದಾ ಆಚಾರ್ಯ ಗ್ರೀನ್ ಸಿಗ್ನಲ್ ನೀಡಿದ್ದು ಇದು ದ್ವಿಭಾಷೆಯಲ್ಲಿ ಸಿದ್ಧಗೊಳ್ಳಲಿರುವುದು ವಿಶೇಷ.

ಕನ್ನಡದ ಜೊತೆಗೆ ಮಲಯಾಳಂ ಭಾಷೆಯಲ್ಲಿಯೂ ಈ ಸಿನಿಮಾ ಬರಲಿದ್ದು ಆ ಮೂಲಕ ಪರಭಾಷೆಯ ಸಿನಿಮಾ ಕ್ಷೇತ್ರದಲ್ಲೂ ಬೃಂದಾ ಆಚಾರ್ಯ ಶೈನ್ ಆಗಲಿದ್ದಾರೆ. ಪ್ರೇಮಂ ಪೂಜ್ಯಂ ನಂತರ ಮಗದೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿರುವ ಬೃಂದಾ ಆಚಾರ್ಯಗೆ ಬಾಲ್ಯದಿಂದಲೂ ಇದ್ದುದು ಒಂದೇ ಕನಸು. ಅದು ನಟಿಯಾಗಬೇಕು ಎಂಬುದು!

ಇಂಜಿನಿಯರಿಂಗ್ ಪದವೀಧರೆಯಾಗಿರುವ ಬೃಂದಾ ಓದು ಮುಗಿದದ್ದೇ ಕಂಪೆನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡ ಗಟ್ಟಿಗಿತ್ತಿ. ಆದರೆ ನಟನೆಯ ಮೇಲಿನ ವ್ಯಾಮೋಹ ಅದ್ಯಾವಾಗ ಜಾಸ್ತಿಯಾಯಿತೋ, ಆಗ ಕೆಲಸ ಬಿಡುವ ನಿರ್ಧಾರ ಮಾಡಿದರು.

ಮೊದಲ ಆಡಿಶನ್ ಗೆ ಹೋದ ಬೃಂದಾ ಆಯ್ಕೆಯಾಗಿದ್ದರು. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ಮಹಾಕಾಳಿ ಯ ಆಡಿಶನ್ ಗೆ ಹೋದ ಬೃಂದಾ ಆಚಾರ್ಯ ರತಿಯ ಪಾತ್ರಕ್ಕೆ ಆಯ್ಕೆಯೂ ಆದರು. ಮಹಾಕಾಳಿ ಧಾರಾವಾಹಿಯ ನಂತರ ಮತ್ತೆ ನಟಿಸಿದ್ದು ಕೂಡಾ ಪೌರಾಣಿಕ ಧಾರಾವಾಹಿಯಲ್ಲಿ ಎಂಬುದು ವಿಶೇಷ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶನಿ ಧಾರಾವಾಹಿಯಲ್ಲಿ ಶನಿಯ ಪತ್ನಿ ದಾಮಿನಿ ಪಾತ್ರಕ್ಕೆ ಜೀವ ತುಂಬಿದ್ದ ಬೃಂದಾ ಆಚಾರ್ಯ ನಂತರದ ದಿನಗಳಲ್ಲಿ ಆರಿಸಿಕೊಂಡಿದ್ದು ಹಿರಿತೆರೆಯನ್ನು. ಪ್ರೇಮಂ ಪೂಜ್ಯಂ ಸಿನಿಮಾದ ನಾಯಕಿಯಾಗಿ ನಟಿಸಿದ್ದ ಬೃಂದಾ ಸಿನಿಪ್ರಿಯರ ಮನದಲ್ಲಿ ಸ್ಥಾನ ಪಡೆದರು. ಇದೀಗ ದ್ವಿಭಾಷೆಯ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಈಕೆಯ ಬಣ್ಣದ ಜರ್ನಿ ಕಲರ್ ಫುಲ್ ಆಗಿ ಸಾಗಲಿ ಎಂಬುದೇ ನಮ್ಮ ಹಾರೈಕೆ.

Leave a Reply

Your email address will not be published. Required fields are marked *