• February 20, 2022

ನಿರಂಜನ್ ಸುಧೀಂದ್ರ ಅಭಿನಯದ “ಹಂಟರ್” ಚಿತ್ರ ಆರಂಭ.

ನಿರಂಜನ್ ಸುಧೀಂದ್ರ ಅಭಿನಯದ “ಹಂಟರ್” ಚಿತ್ರ ಆರಂಭ.

ಅಣ್ಣನ ಮಗನ ಚಿತ್ರಕ್ಕೆ ಪತ್ನಿಸಮೇತರಾಗಿ ಚಾಲನೆ ನೀಡಿದ ರಿಯಲ್ ಸ್ಟಾರ್ ಉಪೇಂದ್ರ.ನಿರಂಜನ್ ಸುಧೀಂದ್ರ ನಾಯಕರಾಗಿ ಅಭಿನಯಿಸುತ್ತಿರುವ “ಹಂಟರ್” ಚಿತ್ರದ ಮುಹೂರ್ತ ಸಮಾರಂಭ ಕಲಾವಿದರ ಸಂಘದಲ್ಲಿ ನೆರವೇರಿದೆ..

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮುಹೂರ್ತ ಸಮಾರಂಭಕ್ಕೆ ಚಾಲನೆ ನೀಡಿದರು. ಜೊತೆಗೆ
ಫಸ್ಟ್‌ ಲುಕ್ ಟೀಸರ್ ಅನ್ನು ಉಪೇಂದ್ರ ಬಿಡುಗಡೆ ಮಾಡಿದ್ದಾರೆ..

ನಿಜ ಹೇಳಬೇಕು ಅಂದರೆ, ಎಲ್ಲಾ ಗೊತ್ತು ಅನ್ನುವವರಿಗೆ ಏನೂ ಗೊತ್ತಿರಲ್ಲ. ಏನೂ ಗೊತ್ತಿಲ್ಲ ಅನ್ನುವವರಿಗೆ ಎಲ್ಲಾ ಗೊತ್ತಿರುತ್ತದೆ ಎಂದು ಉಪೇಂದ್ರ ಮಾತು ಆರಂಭಿಸಿ. ನಿರ್ಮಾಪಕರು ಸಂಕಷ್ಟ ಚತುರ್ಥಿ ದಿವಸ ಗಣ ಹೋಮ ಮಾಡಿ ಚಿತ್ರ ಆರಂಭಿಸಿದ್ದಾರೆ.. ನಿಜಕ್ಕೂ ಒಳ್ಳೆಯದಾಗುತ್ತದೆ. ನಿರ್ದೇಶಕರಾದಿಯಾಗಿ ಇಡೀ ತಂಡದಲ್ಲಿ ಉತ್ಸಾಹವಿದೆ. ನಿರಂಜನ್ ಬಗ್ಗೆ ಹೇಳುವುದಾದರೆ ಅವನು ಚಿಕ್ಕ ವಯಸ್ಸಿನಲ್ಲೇ ನಟ. ನನ್ನ A ಚಿತ್ರದಲ್ಲಿ ಒಂದು ಚಿಕ್ಕ ಮಗು ಮಲಗಿರುವ ದೃಶ್ಯವಿದೆ. ಆ ಮಗು ನಮ್ಮ ನಿರಂಜನ್. ಆನಂತರ ನಾಟಕ, ಸಿನಿಮಾ ಇದರ ಮೇಲೆ ಅವನ ಆಸಕ್ತಿ ಬೆಳೆಯಿತು. ಅಷ್ಟೇ ಶ್ರಮ ಪಡತ್ತಾನೆ. ಅವನಿಗೂ ಒಳ್ಳೆಯದಾಗಲಿ ಎಂದರು ಉಪೇಂದ್ರ.

ಪ್ರಿಯಾಂಕ ಉಪೇಂದ್ರ ಅವರು ‌ಸಹ ಚಿತ್ರತಂಡಕ್ಕೆ ತಮ್ಮ ಮಾತುಗಳ ಮೂಲಕ ಶುಭ ಕೋರಿದರು.

ಮುಹೂರ್ತ ಸಮಾರಂಭಕ್ಕೆ ಆಗಮಿಸಿರುವ ಉಪೇಂದ್ರ ದಂಪತಿಗೆ ಧನ್ಯವಾದ. ಇದು ನಮ್ಮ ಸಂಸ್ಥೆಯ ಮೂರನೇ ಚಿತ್ರ. “ಪರಿ” ಹಾಗೂ “ಸೀಜರ್” ಹಿಂದಿನ ಚಿತ್ರಗಳು. ನಮ್ಮ “ಸೀಜರ್” ಚಿತ್ರ ನಿರ್ದೇಶನ ಮಾಡಿದ್ದ ವಿನಯ್ ಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅವರು ಕಥೆ ಹೇಳಿ, ನಿರಂಜನ್ ನಾಯಕ ಅಂದ ತಕ್ಷಣ ಒಪ್ಪಿಕೊಂಡೆ. ನಿರಂಜನ್ ಅವರಿಗೆ ನಾಯಕನಿಗಿರಬೇಕಾದ ಎಲ್ಲಾ ಗುಣಗಳಿವೆ. ಮುಂದೊಂದು ದಿನ ಅವರು ಬಾಲಿವುಡ್ ನಲ್ಲೂ ಮಿಂಚಲಿದ್ದಾರೆ ಎಂದು ನಿರ್ಮಾಪಕ ತ್ರಿವಿಕ್ರಮ ಸಾಪಲ್ಯ ಹಾರೈಸಿದರು.

ಆರು ತಿಂಗಳ ಹಿಂದೆ ವರಮಹಾಲಕ್ಷೀ ಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣವನ್ನು ಉಪೇಂದ್ರ ಹಾಗೂ ಪ್ರಿಯಾಂಕ ಮಾಡಿಕೊಟ್ಡಿದ್ದರು. ಇಂದು ಮುಹೂರ್ತ ಸಮಾರಂಭದಲ್ಲೂ ಅವರು ಉಪಸ್ಥಿತರಿರುವುದು ಸಂತೋಷ ತಂದಿದೆ. ಇದು ನನ್ನ ಎರಡನೇ ಚಿತ್ರ. “ಹಂಟರ್” ಚಿತ್ರ ಎಲ್ಲರಿಗೂ ಹಿಡಿಸಲಿದೆ. ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರವಂತೆ ಮಾಡುತ್ತದೆ. ನನಗೆ ಕೇಳಿದನ್ನೆಲ್ಲಾ ಕೊಡುವ ನಿರ್ಮಾಪಕರು ಸಿಕ್ಕಿರುವುದು ಪುಣ್ಯ. ಕಳೆದ ಆರು ತಿಂಗಳಿಂದ ಈ ಚಿತ್ರಕ್ಕಾಗಿ ನಿರಂಜನ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಕೇರಳದ ಸೌಮ್ಯ ಮೆನನ್ ಈ ಚಿತ್ರದ ನಾಯಕಿ. ಆಕೆಗೆ ಕನ್ನಡದಲ್ಲಿ ಇದು ಮೊದಲಚಿತ್ರ. ಪ್ರಕಾಶ್ ರಾಜ್, ನಾಜರ್, ಸುಮನ್, ಸಾಧುಲೋಕಿಲ ಮುಂತಾದ ಹೆಸರಾಂತ ಕಲಾವಿದರು ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ . ಚಿತ್ರದ ಚಂದದ ಹಾಡುಗಳಿಗೆ ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ. ಮಹೇಶ್ ಛಾಯಾಗ್ರಹಣ, ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ವಿನಯ್ ಕೃಷ್ಣ ತಮ್ಮ ತಂಡದ ಪರಿಚಯ ಮಾಡಿಕೊಟ್ಟರು.

ಮೊದಲು ನನ್ನ ತಂದೆ, ತಾಯಿ, ಅಜ್ಜಿ, ತಾತ ಹಾಗೂ ಚಿಕ್ಕಪ್ಪ- ಚಿಕ್ಕಮ್ಮನಿಗೆ ಧನ್ಯವಾದ ಹೇಳುತ್ತೇನೆ. ಅದರಲ್ಲೂ ಚಿಕ್ಕಪ್ಪ- ಚಿಕ್ಕಮ್ಮ ನನ್ನ ಎಲ್ಲಾ ಚಿತ್ರಗಳಿಗೂ ನೀಡುತ್ತಿರುವ ಪ್ರೋತ್ಸಾಹ ಮರೆಯುವಂತಿಲ್ಲ. ನಾನು ನಾಯಕನಾಗಿ ನಟಿಸಿರುವ ಯಾವುದೇ ಚಿತ್ರ ತೆರೆಕಂಡಿಲ್ಲ. ಆದರೂ ನನ್ನ ಮೇಲೆ ನಂಬಿಕೆಯಿಟ್ಟು ಅವಕಾಶ ನೀಡಿರುವ‌ ನಿರ್ಮಾಪಕ ತ್ರಿವಿಕ್ರಮ ಅವರಿಗೆ ನಾನು ಆಭಾರಿ. ನಿರ್ದೇಶಕ ವಿನಯ್ ಕೃಷ್ಣ ಅವರ ಕೆಲಸದ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಚಂದನ್ ಶೆಟ್ಟಿ ಅವರು ಸಂಗೀತ ನೀಡುತ್ತಿರುವುದರಿಂದ ಎಲ್ಲಾ ಹಾಡುಗಳು ಚಂದವಾಗಿಯೇ ಇರುತ್ತದೆ. ನಾಯಕಿ ಸೌಮ್ಯ ಅವರು ಉತ್ತಮ ಕಲಾವಿದೆ. ಅವರಿಗೆ ಸಿನಿಮಾ ಮುಗಿಯುವಷ್ಟರಲ್ಲಿ ಕನ್ನಡ ಕಲಿಸುತ್ತೇನೆ. ಈ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ನಿಮ್ಮ ಮುಂದೆ ಬರುತ್ತೇವೆ ಎಂದರು ನಿರಂಜನ್ ಸುಧೀಂದ್ರ.

ಹಿಂದೆ ಮಲೆಯಾಳಂ ಚಿತ್ರದಲ್ಲಿ ಅಭಿನಯಿಸಿದ್ದೆ. ಕನ್ನಡದಲ್ಲಿ ಮೊದಲ ಚಿತ್ರ. ಕಥೆ ಚೆನ್ನಾಗಿದೆ. ನನ್ನ ಪಾತ್ರ ಕೂಡ ತುಂಬಾ ಚೆನ್ನಾಗಿದೆ ಎಂದರು ಸೌಮ್ಯ ಮೆನನ್.

“ಸೀಜರ್” ಚಿತ್ರದಲ್ಲಿ ನನಗೆ ಮೊದಲ ಅವಕಾಶ ಕೊಟ್ಟವರು ನಿರ್ಮಾಪಕ ತ್ರಿವಿಕ್ರಮ್. ಈಗ ಈ ಚಿತ್ರಕ್ಕೂ ನನ್ನನ್ನೇ ಸಂಗೀತ ನಿರ್ದೇಶಕನಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ಧನ್ಯವಾದ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಜಯಂತ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ನಾನು ಒಂದೊಂದು ಹಾಡನ್ನು ಬರೆದಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ.

Leave a Reply

Your email address will not be published. Required fields are marked *