• January 19, 2022

ಹಿರಿತೆರೆಗೆ ಹಾರಿದ ಕಿರುತೆರೆಯ ಯುವರಾಣಿ ಅಂಕಿತಾ ಅಮರ್

ಹಿರಿತೆರೆಗೆ ಹಾರಿದ ಕಿರುತೆರೆಯ ಯುವರಾಣಿ ಅಂಕಿತಾ ಅಮರ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ರಾಜ್ ಗುರು ಮನೆತನದ ಸೊಸೆ, ನಾಯಕಿಯಾಗಿ ನಟಿಸಿ ಕಿರುತೆರೆ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಅಂಕಿತಾ ಅಮರ್ ಈಗಾಗಲೇ ಪರಭಾಷೆಯ ಕಿರುತೆರೆಗೂ ಕಾಲಿಟ್ಟಾಗಿದೆ. ಬಾಲನಟಿಯಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟು, ಮುಂದೆ ನಾಯಕಿಯಾಗಿ ಭಡ್ತಿ ಪಡೆದು ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಅಂಕಿತಾ ಅಮರ್ ಇದೀಗ ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಮೋಡಿ ಮಾಡಿದ ಚೆಲುವೆ.

ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀಮತಿ ಶ್ರೀನಿವಾಸ್ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಅಂಕಿತಾ ಅಮರ್ ಸದ್ಯ ಹಿರಿತೆರೆಗೆ ಹಾರಲಿದ್ದಾರೆ. ಮಯೂರ್ ರಾಘವೇಂದ್ರ ನಿರ್ದೇಶನದ ಹೊಸ ಸಿನಿಮಾ “ಅಬ ಜಬ ದಬ” ದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸಲಿದ್ದಾರೆ ಅಂಕಿತಾ ಅಮರ್.

“ಅಬ ಜಬ ದಬ ಸಿನಿಮಾದಲ್ಲಿ ನಾನು ಗಾಯಕಿಯಾಗಿ ಅಭಿನಯಿಸುತ್ತಿದ್ದೇನೆ. ಈಗಾಗಲೇ ಪಾತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ. ಆ ಪೋಸ್ಟರ್ ನಲ್ಲಿ ನನ್ನ ಫೋಟೋದ ಹಿಂದೆ ಗಾನಗಾರುಡಿಗ ಎಸ್.ಪಿ. ಬಿ ಅವರ ಫೊಟೋವೋ ಇದ್ದು, ಪ್ರಸ್ತುತ ಸಿನಿಮಾದಲ್ಲಿ ನನ್ನ ಪಾತ್ರಕ್ಕೂ ಎಸ್ ಪಿ ಬಿ ಅವರಿಗೂ ಒಂದು ರೀತಿಯ ನಂಟು ಇರುವುದು ವಿಶೇಷ” ಎಂದು ಪಾತ್ರ ಬಗ್ಗೆ ಹೇಳುತ್ತಾರೆ ಅಂಕಿತಾ ಅಮರ್.

“ನನಗೆ ನಟನೆ, ಬಣ್ಣದ ಜಗತ್ತು ಎಂದರೆ ತುಂಬಾ ಇಷ್ಟ. ಇನ್ನು ತುಂಬಾ ಜನರಿಗೆ ಕೇವಲ ಹಿರಿತೆರೆಯಲ್ಲಿ ಮಾತ್ರವೋ ಅಥವಾ ಕಿರುತೆರೆಯಲ್ಲಿ ಮಾತ್ರವೋ ಗುರುತಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಆದರೆ ನನಗೆ ಹಾಗಲ್ಲ. ಕಿರುತೆರೆಯಾಗಲೀ, ಹಿರಿತೆರೆಯಾಗಲೀ ಇಲ್ಲ ರಂಗಭೂಮಿಯಾಗಲೀ ಯಾವ ಕ್ಷೇತ್ರವಾದರೂ ಸರಿ ನಟಿಸಬೇಕಷ್ಟೇ. ಹಾಗಾಗಿ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಾಗ ಸಂತಸದಿಂದ ಒಪ್ಪಿಕೊಂಡೆ” ಎನ್ನುತ್ತಾರೆ ಅಂಕಿತಾ.

ಮೆಡಿಕಲ್ ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಂಕಿತಾ ಅಮರ್ ಬಾಲನಟಿಯಾಗಿ ಕಿರುತೆರೆಗೆ ಕಾಲಿಟ್ಟ ಬೆಡಗಿ. ಫಣಿ ರಾಮಚಂದ್ರ ನಿರ್ದೇಶನದ ಜಗಳಗಂಟಿಯರು ಧಾರಾವಾಹಿಯಲ್ಲಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಅಂಕಿತಾ ತದ ನಂತರ ಕ್ರೇಜಿ ಸ್ಟಾರ್ ಅಭಿನಯದ ತುಂಟ ಸಿನಿಮಾದಲ್ಲಿ ಬಾಲನಟಿಯಾಗಿ ಮೋಡಿ ಮಾಡಿದರು. ದೂರದರ್ಶನ ದಲ್ಲಿ ಪ್ರಸಾರವಾಗುತ್ತಿದ್ದ ಜನಾರಣ್ಯದಲ್ಲಿ ನಟಿಸಿದ್ದ ಅಂಕಿತಾ ಓದಿನ ಸಲುವಾಗಿ ನಟನೆಯಿಂದ ಕೊಂಚ ದೂರವಿದ್ದರು.

ಪದವಿ ಮುಗಿದ ಬಳಿಕ ಮತ್ತೆ ನಟಿಸುವ ಅವಕಾಶ ಪಡೆದುಕೊಂಡ ಅಂಕಿತಾ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ಮಹೇಶನ ದೊಡ್ಡಪ್ಪನ ಮಗಳು ಸುಗುಣ ಆಗಿ ಮೋಡಿ ಮಾಡಿದರು. ಕುಲವಧು ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಂಕಿತಾ ನಮ್ಮನೆ ಯುವರಾಣಿಯಾಗಿ ಕರುನಾಡಿನಾದ್ಯಂತ ಮನೆ ಮಾತಾಗಿದ್ದರು.ಇದೀಗ ಹಿರಿತೆರೆಯಲ್ಲಿ ಮಿಂಚಲಿರುವ ಅಂಕಿತಾಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್ ‌

Leave a Reply

Your email address will not be published. Required fields are marked *