- February 1, 2022
ಲವ್ಲಿ 20 ಇಯರ್ಸ್ ಎಂದ ಪ್ರೇಮ್… ಯಾಕೆ ಗೊತ್ತಾ?

ಚಂದನವನದಲ್ಲಿ ಲವ್ಲಿ ಸ್ಟಾರ್ ಎಂದೇ ಜನಪ್ರಿಯತೆ ಪಡೆದಿರುವ ಹ್ಯಾಂಡ್ ಸಮ್ ಹುಡುಗ ಪ್ರೇಮ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು 20 ವರ್ಷಗಳಾಗಿವೆ. ಈ ಸಂಭ್ರಮದಲ್ಲಿ ಪ್ರೇಮ್ ತನ್ನ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ವಿಶೇಷ ದಿನದಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರೇಮ್ ಹಿಂದುಗಡೆ “ಲವ್ಲಿ 20 ಇಯರ್ಸ್” ಎಂದು ಬರೆದುಕೊಂಡಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ ” 20 ವರ್ಷದ ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಜೊತೆಯಾಗಿ ನಿಂತು ನನ್ನನ್ನು ಸಲಹಿ ಬೆಳೆಸಿದ ಚಿತ್ರರಂಗದ ಕುಟುಂಬಕ್ಕೆ , ಅಭಿಮಾನಿಗಳಿಗೆ , ಮಾಧ್ಯಮಕ್ಕೆ , ಸ್ನೇಹಿತರಿಗೆ ಹಾಗೂ ನನ್ನ ಕುಟುಂಬಕ್ಕೆ ಮತ್ತು ಕನ್ನಡ ಕಲಾಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು. ನಿಮ್ಮ ಪ್ರೀತಿ , ಅಭಿಮಾನ ಆಶೀರ್ವಾದ ಸದಾ ಹೀಗೆ ಇರಲಿ” ಎಂದು ಫೋಟೋ ಕೆಳಗೆ ಪ್ರೇಮ್ ಬರೆದುಕೊಂಡಿದ್ದಾರೆ.

ಇಂತಿಪ್ಪ ಪ್ರೇಮ್ 2004ರಲ್ಲಿ ಬಿಡುಗಡೆಯಾದ ಪ್ರಾಣ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2005ರಲ್ಲಿ ಬಿಡುಗಡೆಯಾದ ರತ್ನಜ ನಿರ್ದೇಶನದ “ನೆನಪಿರಲಿ” ಚಿತ್ರದಲ್ಲಿ ನಾಯಕ ಆಗಿ ನಟಿಸಿದ್ದ ಪ್ರೇಮ್ ಅವರಿಗೆ ಈ ಚಿತ್ರ ಕೇವಲ ಯಶಸ್ಸು ಮಾತ್ರವಲ್ಲದೇ ಪ್ರಶಸ್ತಿಯನ್ನು ಕೂಡಾ ತಂದುಕೊಟ್ಟಿತು. ಹೌದು, ಈ ಚಿತ್ರಕ್ಕೆ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡಿದ್ದರು ಲವ್ಲಿ ಸ್ಟಾರ್.

2006ರಲ್ಲಿ ಬಿಡುಗಡೆಯಾದ ಜೊತೆ ಜೊತೆಯಲಿ ಚಿತ್ರ “ಬ್ಲಾಕ್ ಬಸ್ಟರ್” ಎಂದು ಅನಿಸಿಕೊಂಡಿತು. ಇನ್ನು ಇವರ ನಟನೆಯ ಪಲ್ಲಕ್ಕಿ ಚಿತ್ರ ಕೂಡಾ ನೂರು ದಿನ ಓಡಿತ್ತು. ಮುಂದೆ ಗುಣವಂತ , ಸವಿಸವಿ ನೆನಪು ಚಿತ್ರಗಳಲ್ಲಿ ನಟಿಸಿದರು. ಹೊಂಗನಸು , ಜೊತೆಗಾರ, ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ,ಧನ್ ಧನಾ ಧನ್ , ಚಂದ್ರ , ಚಾರ್ ಮಿನಾರ್ , ಫೇರ್ ಆಂಡ್ ಲವ್ಲಿ , ಮಳೆ ,ಮಸ್ತ್ ಮೊಹಬ್ಬತ್ ,ಚೌಕ , ದಳಪತಿ , ಲೈಫ್ ಜೊತೆ ಒಂದು ಸೆಲ್ಫಿ ಸೇರಿದಂತೆ ಒಟ್ಟು 26 ಚಿತ್ರಗಳಲ್ಲಿ ನಟಿಸಿರುವ ಪ್ರೇಮ್ ಕಳೆದ ವರ್ಷ ರಿಲೀಸ್ ಆದ ಪ್ರೇಮಂ ಪೂಜ್ಯಂ ನಲ್ಲಿಯೂ ನಾಯಕರಾಗಿ ಮನ ಸೆಳೆದಿದ್ದರು.

ಚಾರ್ ಮಿನಾರ್ ಚಿತ್ರದ ನಟನೆಗಾಗಿ ಎರಡನೇ ಫಿಲ್ಮ್ ಫೇರ್ ಅವಾರ್ಡ್ ಕೂಡಾ ಪಡೆದಿರುವ ಚಂದನವನದ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿರುವ ಪ್ರೇಮ್ ಶಿವರಾಜ್ ಕುಮಾರ್ ಅಭಿನಯದ ಚೆಲುವೆಯೇ ನಿನ್ನೇ ನೋಡಲು ಹಾಗೂ ಅನಂತನಾಗ್ ಅಭಿನಯದ ಎರಡನೇ ಮದುವೆ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.