- July 4, 2022
ಕನ್ನಡತಿ ಧಾರಾವಾಹಿಯಿಂದ ಮತ್ತೊಂದು ಶಾಕಿಂಗ್ ಸುದ್ದಿ… ಏನು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ಇದೀಗ ಮಗದೊಂದು ಪಾತ್ರದ ಬದಲಾವಣೆಯಾಗಲಿದೆ. ಈಗಾಗಲೇ ಸಾನಿಯಾ ಹಾಗೂ ದೇವ್ ಪಾತ್ರಗಳು ಕಾರಣಾಂತರಗಳಿಂದ ಬದಲಾವಣೆಗೊಂಡಿದ್ದು ಆ ಜಾಗಕ್ಕೆ ಹೊಸ ನಟಿ ಹಾಗೂ ನಟ ಬಂದಾಗಿದೆ. ಇದೀಗ ಆದಿ ಪಾತ್ರಧಾರಿ ಕೂಡಾ ಶೀಘ್ರದಲ್ಲಿ ಬದಲಾಗಲಿದ್ದಾರೆ.

ನಾಯಕ ಹರ್ಷನ ಚಿಕ್ಕಮ್ಮನ ಮಗ ಆದಿಯಾಗಿ ನಟಿಸುತ್ತಿದ್ದ ರಕ್ಷಿತ್ ಗೌಡ ಇದೀಗ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದಾರೆ. ಇನ್ನು ಅವರ ಜಾಗಕ್ಕೆ ಯಾರು ಬರುತ್ತಾರೆ ಎಂದು ಇನ್ನು ಕೂಡಾ ಬಹಿರಂಗವಾಗಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪದ್ಮಾವತಿ ಧಾರಾವಾಹಿ ವಿಕ್ರಮ್ ಆಗಿ ಕಿರುತೆರೆಗೆ ಕಾಲಿಟ್ಟ ರಕ್ಷಿತ್ ಅವರಿಗೆ ಕನ್ನಡತಿ ಎರಡನೇ ಧಾರಾವಾಹಿ.

ಎಳವೆಯಲ್ಲಿಯೆ ನಾಟಕಗಳತ್ತ ಆಕರ್ಷಿತಗೊಂಡ ರಕ್ಷಿತ್ ಗೌಡ ಅವರಿಗೆ ನಟನೆಗಿಂತಲೂ ಸಿನಿಮಾ ನಿರ್ಮಾಣ ಮಾಡಬೇಕೆಂಬ ಬಯಕೆಯಿತ್ತು. ಡೈರೆಕ್ಟರ್ ಅಲೆಮಾರಿ ಸಂತು ಅವರ ಬಳಿ ಸೇರಿದ ರಕ್ಷಿತ್ ಗೌಡ ಎರಡು ವರ್ಷಗಳ ಕಾಲ ಅವರ ಜೊತೆ ಇದ್ದು ನಿರ್ಮಾಣದ ಕುರಿತು ಅರಿತುಕೊಂಡರು.

ಅಷ್ಟರಲ್ಲಿ ಪದ್ಮಾವತಿ ಧಾರಾವಾಹಿಯಲ್ಲಿ ನಟಿಸುವ ಸುವರ್ಣಾವಕಾಶ ದೊರಕಿತು. ನಟನಾ ಕ್ಷೇತ್ರ ಹೊಸತಾದುದರಿಂದ ಮೊದಲ ಬಾರಿ ನಟಿಸಲು ಭಯವಾದರೂ ಮುಂದೆ ನಟನೆಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದರು.

ಕಿರುತೆರೆ ಜೊತೆಗೆ ಭರ್ಜರಿ, ಕಾಲೇಜು ಕುಮಾರ ಸಿನಿಮಾಗಳಲ್ಲಿ ಅಭಿನಯಿಸಿರುವ ರಕ್ಷಿತ್ ಗೌಡ ಅವರು ನಟನೆಯ ಹೊರತಾಗಿ ಉತ್ತಮ ಡ್ಯಾನ್ಸರ್ ಹೌದು. ಡ್ಯಾನ್ಸ್ ನ ವಿವಿಧ ಪ್ರಕಾರಗಳಾದ ಹಿಪ್ ಅಪ್, ಕಾಂಟೆಪ್ಪರರಿ, ಫ್ರೀ ಸ್ಟೈಲ್ ಅನ್ನು ಮಾಸ್ಟರ್ ಜಗದೀಶ್ ಅವರಿಂದ ಕಲಿತಿರುವ ರಕ್ಷಿತ್ ಈಗಾಗಲೇ ಸಾಕಷ್ಟು ಸ್ಟೇಜ್ ಶೋ ಕೂಡಾ ನೀಡಿದ್ದಾರೆ.

ನೃತ್ಯದಲ್ಲಿ ಪರಿಣಿತಿ ಪಡೆದಿರುವ ರಕ್ಷಿತ್ ಗೌಡ ‘ಡ್ಯಾನ್ಸ್ ಗ್ಯಾರೇಜ್’ ಎಂಬ ಡ್ಯಾನ್ಸ್ ಕ್ಲಾಸ್ ಕೂಡಾ ಆರಂಭಿಸಿದ್ದಾರೆ. ಕೇವಲ ಡ್ಯಾನ್ಸ್ ಮಾತ್ರವಲ್ಲದೇ ಜುಂಬಾ, ಏರೋಬಿಕ್ಸ್, ಯೋಗ, ಮ್ಯೂಸಿಕ್ ಹಾಗೂ ಆ್ಯಕ್ಟಿಂಗ್ ನ್ನು ಕೂಡಾ ಇವರ ಕ್ಲಾಸ್ ನಲ್ಲಿ ತರಬೇತಿ ನೀಡಲಾಗುತ್ತಿದೆ.