• February 25, 2022

ರೆಬೆಲ್ ಸ್ಮಾರಕಕ್ಕೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ

ರೆಬೆಲ್ ಸ್ಮಾರಕಕ್ಕೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ

‘ಕರುನಾಡ ಕರ್ಣ’ ರೆಬೆಲ್ ಸ್ಟಾರ್ ಡಾ| ಅಂಬರೀಷ್ ನಮ್ಮನ್ನಗಲಿ ಸುಮಾರು ಮೂರುವರೆ ವರ್ಷಗಳು ಸಂದಿವೆ. 2018ರ ನವೆಂಬರ್ 24ರಂದು ನಮ್ಮನ್ನೆಲ್ಲ ಅಗಲಿ ಇಹಲೋಕ ತ್ಯಜಿಸಿದ್ದರು ಅಂಬಿ ಅಣ್ಣ. ಇದೀಗ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅವರ ಸ್ಮಾರಕದ ಶಂಕುಸ್ಥಾಪನೆಗೆ ದಿನಾಂಕ ಗೊತ್ತಾಗಿದೆ.

ಇದೇ ಫೆಬ್ರವರಿ 27ರಂದು ಕಂಠೀರವ ಸ್ಟುಡಿಯೋ ಆವರಣದಲ್ಲಿ ಕರುನಾಡ ಕರ್ಣನ ಸ್ಮಾರಕಕ್ಕೆ ಕರುನಾಡ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಂಠೀರವ ಸ್ಟುಡಿಯೋದ ಆವರಣದಲ್ಲಿರುವ ಅಂಬಿ ಸಮಾಧಿಯ ದಲ್ಲೇ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಇನ್ನು ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಿಯೆಗಳು ನಡೆಯಲಿದ್ದು, ಸರಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಆಯುಕ್ತ ಪಿ ಎಸ್ ಹರ್ಷ ಸೇರಿದಂತೆ ಚಂದನವನದ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ವಿಧಿ-ವಿಧಾನಗಳು ನಡೆಯಲಿವೆ.

ನಟಿ, ಸಂಸದೆ ಮಾತ್ರವಲ್ಲದೆ ಡಾ| ಅಂಬರೀಷ್ ಅವರ ಧರ್ಮಪತ್ನಿಯಾದ ಸುಮಲತಾ ಅಂಬರೀಶವರ ಮುಂದಾಳತ್ವವನ್ನ ಕಾರ್ಯಕ್ರಮದಲ್ಲಿ ನಿರೀಕ್ಷಿಸಬಹುದಾಗಿದೆ. ಸರ್ಕಾರ ಕಳೆದ ಸಾಲಿನ ಬಜೆಟ್ ನಲ್ಲಿ ಒಟ್ಟು 12 ಕೋಟಿ ಅನುದಾನವನ್ನು ಸ್ಮಾರಕಕ್ಕಾಗಿ ಮೀಸಲಿಟ್ಟಿದೆ. ಎಲ್ಲವೂ ಸಾಂಗವಾಗಿ ಸಾಗಿದರೆ ಸದ್ಯದಲ್ಲೇ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಾಲ್ಕು ಸ್ಮಾರಕಗಳು ನೆಲೆಯೂರಲಿವೆ. ಬಹುಪಾಲು ಸಂಪೂರ್ಣವಾಗಿರೋ ರಾಜಕುಮಾರ್ ಸ್ಮಾರಕ ಒಂದಾದರೆ.. ಈಗ ಶಂಕುಸ್ಥಾಪನೆಗೊಳ್ಳುತ್ತಿರುವ ಅಂಬಿ ಸ್ಮಾರಕ ಎರಡನೆಯದು. ಇವಲ್ಲದೆ ಪಾರ್ವತಮ್ಮ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಸಮಾಧಿಯು ಕೂಡ ಅಲ್ಲೇ ಇರುವುದರಿಂದ ಆ ಗಣ್ಯರ ಸ್ಮಾರಕಗಳೂ ಸಹ ಸದ್ಯದಲ್ಲೇ ತಮ್ಮತಮ್ಮ ಸ್ಥಾನವನ್ನ ಭರ್ತಿ ಮಾಡಲಿವೆ.

Leave a Reply

Your email address will not be published. Required fields are marked *