• April 16, 2022

ಕಿರುತೆರೆ ಖಳನಾಯಕಿಯ ಬಣ್ಣದ ಪಯಣ ಶುರುವಾಗಿದ್ದು ಹಿರಿತೆರೆಯಿಂದ

ಕಿರುತೆರೆ ಖಳನಾಯಕಿಯ ಬಣ್ಣದ ಪಯಣ ಶುರುವಾಗಿದ್ದು ಹಿರಿತೆರೆಯಿಂದ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಪೈಕಿ ಮಂಗಳ ಗೌರಿ ಮದುವೆ ಕೂಡಾ ಒಂದು. ವಿಭಿನ್ನ ಕಥಾ ಹಂದರದ ಮೂಲಕ ಸೀರಿಯಲ್ ವೀಕ್ಷಕರ ಮನ ಸೆಳೆದಿರುವ ಮಂಗಳ ಗೌರಿ ಮದುವೆ ಧಾರಾವಾಹಿಯು ಕಥೆಯ ಹೊರತಾಗಿ ಪಾತ್ರವರ್ಗದ ಮೂಲಕವೂ ಮನೆ ಮಾತಾಗಿದೆ ಎಂದರೆ ತಪ್ಪಲ್ಲ. ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಖಳನಾಯಕಿ ಸೌಂದರ್ಯ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ತನಿಷಾ ಕುಪ್ಪಂಡಗೆ ಎಳವೆಯಿಂದಲೂ ನಟನೆಯತ್ತ ವಿಶೇಷ ಒಲವು.

ಬಾಲ್ಯದಿಂದಲೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ತನ್ನ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ತನಿಷಾ ಬಿಬಿಎಂ ಪದವೀಧರೆಯೂ ಹೌದು. ಪದವಿಯ ನಂತರ ನಟನೆಯತ್ತ ಮುಖ ಮಾಡಿದ್ದ ತನಿಷಾ ಮೊದಲು ನಟಿಸಿದ್ದು ಸಿನಿಮಾದಲ್ಲಿ. ಹೌದು, ಹಿರಿತೆರೆ ಮೂಲಕ ನಟನಾ ಪಯಣ ಶುರು ಮಾಡಿದ್ದ ಈಕೆ ಇಂದು ಕಿರುತೆರೆಯಲ್ಲಿಯೂ ಬ್ಯುಸಿ ಅನ್ನಿ.

ದಿಗಂತ್ ಅಭಿನಯದ ಪಾರಿಜಾತ ಸಿನಿಮಾದಲ್ಲಿ ದಿಗಂತ್ ತಂಗಿಯಾಗಿ ನಟಿಸುವ ಮೂಲಕ ನಟನಾ ನಂಟು ಬೆಳೆಸಿಕೊಂಡ ಈಕೆ ಮುಂದೆ ರೊಮಿಯೋ, ದೇವ್ ಸನ್ ಆಫ್ ಮುದ್ದೇಗೌಡ, ಗೋಕುಲ ಕೃಷ್ಣ, ಮೇಘಾ ಆಲಿಯಾಸ್ ಮ್ಯಾಗಿ ಸಿನಿಮಾಗಳಲ್ಲಿ ಅಭಿನಯಿಸಿದರು.

ಕೋಮಲ್ ನಟನೆಯ 2020 ರಲ್ಲಿ ಪ್ರಮುಖ ಪಾತ್ರದಲ್ಲಿ ತನಿಷಾ ಅಭಿನಯಿಸಿದ್ದು ಅದು ಬಿಡುಗಡೆಗೆ ತಯಾರಾಗಿದೆ. ಇನ್ನು ಇದರ ಜೊತೆಗೆ ಬ್ಲೂ ರೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು, ಅದು ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ರಾಘು ಶಿವಮೊಗ್ಗ ನಿರ್ದೇಶನದ ಪೆಂಟಗಾನ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಅದು ಕೂಡಾ ಬಿಡುಗಡೆಗೆ ತಯಾರಾಗಿದೆ.

ಮುಂದೆ ಕಿರುತೆರೆಗೆ ಕಾಲಿಟ್ಟ ಈಕೆ ನಟಿಸಿದ್ದು ಒಂದೆರಡು ಧಾರಾವಾಹಿಗಳಲ್ಲಿ ಅಲ್ಲ! ಮಾಯಾ, ಸರಯೂ, ಸಾಕ್ಷಿ, ದುರ್ಗಾ, ಪ್ರೀತಿ ಎಂದರೇನು, ಪುಟ್ಮಲ್ಲಿ, ಅಶ್ವಿನಿ ನಕ್ಷತ್ರ, ಓಂ ಶಕ್ತಿ ಓಂ ಶಾಂತಿ, ವಾರಸ್ದಾರ ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದ್ದ ಈಕೆ ಖಳನಾಯಕಿಯಾಗಿ ಅಬ್ಬರಿಸಿದ್ದೇ ಹೆಚ್ಚು‌.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಖಳನಾಯಕಿ ತಾಪ್ಸಿ ಆಗಿ ನಟಿಸಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಈಕೆ ಇತ್ತೀಚೆಗಷ್ಟೇ ಸುಖಾಂತ್ಯ ಕಂಡ ಇಂತಿ ನಿನ್ನ ಆಶಾ ಧಾರಾವಾಹಿಯಲ್ಲಿಯೂ ವಿಲನ್ ಮೋನಿಕಾ ಆಗಿ ಸದ್ದು ಮಾಡಿದ್ದಾರೆ.

ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸಿರುವ ಈಕೆ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯ ಕಾರ್ಯಕ್ರಮ ನಗ್ಸೋ ಚಾಲೆಂಜ್ ನ ನಿರೂಪಕಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಲಿರುವ ಈಕೆ ವೆಬ್ ಸಿರೀಸ್ ನಲ್ಲಿಯೂ ಬಣ್ಣ ಹಚ್ಚಲಿದ್ದಾರೆ.

Leave a Reply

Your email address will not be published. Required fields are marked *