- January 31, 2022
ಸ್ಫೂರ್ತಿ ನೀಡುವ ಪಾತ್ರಗಳಲ್ಲಿ ನಟಿಸಲು ಸಿದ್ಧ – ಕವಿತಾ ಗೌಡ

ಕಿರುತೆರೆ ಮೂಲಕ ನಟನಾ ಪಯಣ ಶುರು ಮಾಡಿದ ಅನೇಕ ಕಲಾವಿದರುಗಳು ಇಂದು ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಕವಿತಾ ಗೌಡ ಕೂಡಾ ಇದಕ್ಕೆ ಹೊರತಾಗಿಲ್ಲ. ಗೋವಿಂದ ಗೋವಿಂದ ಸಿನಿಮಾದಲ್ಲಿ ನಟಿಸಿದ್ದ ಕವಿತಾ ಗೌಡ ಇದೀಗ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಮಧು ಕೆ ಶ್ರೀಕರ್ ನಿರ್ದೇಶನದಲ್ಲಿ ಮೂಡಿ ಬರಲಿರುವ “ದ್ವಿಮುಖ” ಚಿತ್ರದಲ್ಲಿ ಪ್ರವೀಣ್ ಅಥರ್ವ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಕವಿತಾ ಗೌಡ.

“ದ್ವಿಮುಖ ಸಿನಿಮಾದಲ್ಲಿ ಅಭಿನಯಕ್ಕೆ ತುಂಬಾ ಉತ್ತಮವಾದ ಅವಕಾಶವಿದೆ” ಎಂದು ಹೇಳುವ ಕವಿತಾ ಗೌಡ “ಪ್ರಸ್ತುತ ಸಿನಿಮಾದಲ್ಲಿ ನಾನು ವಿಭಾ ಪಾತ್ರಕ್ಕೆ ಜೀವ ತುಂಬಲಿದ್ದೇನೆ.
ಮಾತ್ರವಲ್ಲ ಇಡೀ ಕಥೆ ನನ್ನ ಸುತ್ತ ಅಂದರೆ ನಾಯಕಿ ಸುತ್ತ ಸುತ್ತುತ್ತದೆ. ಹಳ್ಳಿಯ ಹುಡುಗಿಯಾಗಿರುವ ವಿಭಾ ತಂದೆ ತಾಯಿಯರನ್ನು ಕಳೆದುಕೊಂಡಿರುತ್ತಾಳೆ. ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುವ ಆಕೆ ಸಂತೋಷದಿಂದ ಬದುಕುತ್ತಾ ಇರುತ್ತಾಳೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಅಲ್ಲಿಂದ ಕಾಣೆಯಾಗುವ ಆಕೆ ತನ್ನ ಊರಿಗೆ ಬಂದು ತಂದೆತಾಯಿಯ ಸಾವಿನ ಕಾರಣವನ್ನು ಹುಡುಕುತ್ತಾಳೆ. ಇದು ಕಥೆಗೆ ತಿರುವು ನೀಡುತ್ತದೆ” ಎಂದು ಹೇಳುತ್ತಾರೆ.

“ದ್ವಿಮುಖ ಸಂಪೂರ್ಣ ಹೊಸಬರ ತಂಡವಾಗಿದೆ ನಿಜ. ಸಿನಿಮಾದ ಸ್ಕ್ರಿಪ್ಟ್ ಕೇಳಿ ನಾನು ಫಿದಾ ಆದೆ. ಆದ ಕಾರಣ ನಟಿಸಲು ಒಪ್ಪಿಕೊಂಡೆ” ಎಂದು ಸಂತಸ ವ್ಯಕ್ತಪಡಿಸುವ ಕವಿತಾ ಗೌಡ “ಕಳೆದ ವರ್ಷ ನನ್ನ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಯಾಗಿದ್ದವು. ಇನ್ನು ನನ್ನನ್ನು ಕಂಫರ್ಟ್ ಜೋನ್ ನಿಂದ ತಳ್ಳುವ ಪಾತ್ರಗಳನ್ನು ಎದುರು ನೋಡುತ್ತಿರುವೆ. ಯಾವುದೇ ಪಾತ್ರವಾಗಿರಲಿ, ಅದು ನನಗೆ ಸ್ಪೂರ್ತಿ ನೀಡಿದರೆ ನಾನು ಹೊಸಬರೊಂದಿಗೆ ನಟಿಸಲು ನಿರಾಕರಿಸುವುದಿಲ್ಲ”ಎಂದಿದ್ದಾರೆ.

ತಮಿಳಿನ ಮಹಾಭಾರತಂ ಸಿನಿಮಾದ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ ತೆಲುಗಿನ ಸ್ವಾತಿ ಚಿನಕುಲು, ಕನ್ನಡದ ಲಕ್ಷ್ಮಿ ಬಾರಮ್ಮ, ತಮಿಳಿನ ನೀಲಿ, ಕನ್ನಡದ ವಿದ್ಯಾ ವಿನಾಯಕ, ತಮಿಳಿನ ಪಾಂಡಿಯನ್ ಸ್ಟೋರ್ ಜೊತೆಗೆ ತಮಿಳಿನ ಮಗರಾಸಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಬಿಗ್ ಬಾಸ್ ಸೀಸನ್ 6 ರಲ್ಲಿ ಭಾಗವಹಿಸುವ ಮೂಲಕ ರಿಯಾಲಿಟಿ ಶೋ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಈಕೆ ಮುಂದೆ ಡ್ಯಾನ್ಸ್ ರಿಯಾಲಿಟಿ ಶೋಗಳಾದ ತಕಧಿಮಿತಾ ಹಾಗೂ ಡ್ಯಾನ್ಸ್ ಡ್ಯಾನ್ಸ್ ನಲ್ಲಿ ಹೆಜ್ಜೆ ಹಾಕಿದ ಚೆಲುವೆ. ಇನ್ನು ಕುಕ್ಕಿಂಗ್ ಶೋ ಕುಕ್ಕು ವಿಥ್ ಕಿರಿಕ್ಕು ವಿನಲ್ಲಿ ಭಾಗವಹಿಸಿದ್ದ ಈಕೆ ಶ್ರೀನಿವಾಸ ಕಲ್ಯಾಣ ದ ಅಕ್ಷರ ಆಗಿ ಹಿರಿತೆರೆಯಲ್ಲಿ ಮಿಂಚಿದರು.

ಮುಂದೆ ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಬೀರಬಲ್, ಗೋವಿಂದ ಗೋವಿಂದ ಹಾಗೂ ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾದಲ್ಲಿ ನಟಿಸಿರುವ ಈಕೆ ಇದೀಗ ದ್ವಿಮುಖ ದಲ್ಲಿ ಬಣ್ಣ ಹಚ್ಚಲಿದ್ದಾರೆ.