- February 4, 2022
ಶಿವರಾಜ್ ಕುಮಾರ್ ಎನರ್ಜಿ ಲೆವೆಲ್ ಗೆ ಯಾರೂ ಸರಿಸಾಟಿಯಿಲ್ಲ ಎಂದು ಶ್ವೇತಾ ಚೆಂಗಪ್ಪ ಹೇಳಿದ್ಯಾಕೆ ಗೊತ್ತಾ?

ಸುಮತಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದ ಕೊಡಗಿನ ಕುವರಿ ಶ್ವೇತಾ ಚೆಂಗಪ್ಪ ತದ ನಂತರ ಕಾದಂಬರಿ, ಸುಕನ್ಯಾ, ಆರುಂಧತಿ, ಸೌಂದರ್ಯ.. ಹೀಗೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದು ಸೀರಿಯಲ್ ಪ್ರಿಯರಿಗೆ ತಿಳಿದಿರುವ ವಿಚಾರ. ನಟನೆಯ ಹೊರತಾಗಿ ನಿರೂಪಣೆಯಲ್ಲೂ ಸಕ್ರಿಯರಾಗಿರುವ ಈಕೆ ಯಾರಿಗುಂಟು ಯಾರಿಗಿಲ್ಲ, ಕುಣಿಯೋಣು ಬಾರಾ, ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್ ನ ನಿರೂಪಕಿಯಾಗಿ ಮೋಡಿ ಮಾಡಿದ್ದರು.
ಬಿಗ್ ಬಾಸ್ ಸೀಸನ್ 2 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಶ್ವೇತಾ ಚೆಂಗಪ್ಪಗೆ ಬ್ರೇಕ್ ನೀಡಿದ್ದು ಮಜಾ ಟಾಕೀಸ್. ಹೌದು, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ ನಲ್ಲಿ ಸೃಜನ್ ಪತ್ನಿ ರಾಣಿಯಾಗಿ ಕಾಣಿಸಿಕೊಂಡಿದ್ದ ಶ್ವೇತಾ ರನ್ನು ಜನ ಸ್ವೀಕರಿಸಿದರು.

ಮಜಾಟಾಕೀಸ್ ನ ರಾಣಿ ಎಂದೇ ಸದ್ಯ ಫೇಮಸ್ ಆಗಿರುವ ಶ್ವೇತಾ ಮಜಾಟಾಕೀಸ್ ಮುಕ್ತಾಯವಾದ ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇನ್ನು ಬಹು ದೊಡ್ಡ ವಿರಾಮದ ಬಳಿಕ ಮತ್ತೆ ನಟನೆಯತ್ತ ಮುಖ ಮಾಡಿರುವ ಶ್ವೇತಾ ಇದೀಗ ಹಿರಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹರ್ಷ ನಿರ್ದೇಶನದ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ವೇದ ದಲ್ಲಿ ನಟಿಸುವ ಮೂಲಕ ಹಿರಿತೆರೆಗೆ ಬಂದಿದ್ದಾರೆ ಶ್ವೇತಾ ಚೆಂಗಪ್ಪ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಆಕೆ “ಒಂದು ಉತ್ತಮವಾದ ಪಾತ್ರದ ಮೂಲಕ ಮತ್ತೆ ನಟನಾ ಕ್ಷೇತ್ರಕ್ಕೆ ಕಾಲಿಡಬೇಕು ಎಂದು ನಾನು ಸುಮಾರು ವರ್ಷಗಳಿಂದ ಕಾಯುತ್ತಿದ್ದೆ. ಮಾತ್ರವಲ್ಲ ಜನರು ಬಹಳ ಇಷ್ಟಪಡುವ ಪಾತ್ರಕ್ಕೆ ಜೀವ ತುಂಬಬೇಕು ಎಂಬುದು ನನ್ನ ಆಸೆಯಾಗಿತ್ತು. ಹರ್ಷ ನನ್ನ ಆತ್ಮೀಯ ಸ್ನೇಹಿತ. ಪ್ರತಿ ಬಾರಿ ಸಿನಿಮಾ ಮಾಡುವ ಸಮಯದಲ್ಲಿ ಅವರು ಪಾತ್ರಗಳೊಂದಿಗೆ ನನ್ನನ್ನು ಸಂಪರ್ಕಿಸುತ್ತಿದ್ದರು. ಆದರೆ ನಾನು ಕಿರುತೆರೆಯ ಕಮಿಟ್‌ಮೆಂಟ್‌ಗಳಿಂದಾಗಿ ನಟಿಸಲು ಸಾಧ್ಯವಾಗಿರಲಿಲ್ಲ” ಎಂದು ಹೇಳುತ್ತಾರೆ.

“ವೇದ ಸಿನಿಮಾದ ಪಾತ್ರದ ಬಗ್ಗೆ ಹರ್ಷ ಹೇಳಿದಾಗ ನಾನು ಇದು ನನಗೆ ಸರಿ ಹೊಂದುವ ಪಾತ್ರ ಎಂದು ಎನಿಸಿತು. ಜೊತೆಗೆ ಈ ಪಾತ್ರಕ್ಕೆ ನಾನು ಸೂಕ್ತ ಎಂದು ಹರ್ಷ ಕೂಡಾ ಭಾವಿಸಿದ್ದರು. ವೇದ ಸಿನಿಮಾದ ಮೂಲಕ ಮತ್ತೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಸಂತಸ ತಂದಿದೆ” ಎಂದು ಹೇಳುತ್ತಾರೆ ಶ್ವೇತಾ ಚೆಂಗಪ್ಪ.

ಶಿವರಾಜ್ ಕುಮಾರ್ ಅವರೊಂದಿಗೆ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಶ್ವೇತಾ ಚೆಂಗಪ್ಪ “ಶಿವರಾಜ್ ಕುಮಾರ್ ಅವರ ಎನರ್ಜಿ ಲೆವೆಲ್ ಗೆ ಯಾರೂ ಸರಿಸಾಟಿಯಿಲ್ಲ” ಎಂದು ಹೇಳಿದ್ದಾರೆ. ಇನ್ನು ಶ್ರೀರಂಗಪಟ್ಟಣದ ಸಮೀಪವಿರುವ ಹಳ್ಳಿಯೊಂದರಲ್ಲಿ ಶೂಟಿಂಗ್ ಶ್ವೇತಾ ಇದೇ ಮೊದಲ ಬಾರಿಗೆ ಮಗ ಜಿಯಾನ್ ನಿಂದ ದೂರವಿದ್ದಾರೆ.

“ಜಿಯಾನ್ ಹುಟ್ಟಿದ ಬಳಿಕ ಇದೇ ಮೊದಲ ಬಾರಿಗೆ ನಾನು ಅವನಿಂದ ದೂರವಿದ್ದೇನೆ. ಅದು ಕೂಡಾ ಒಂದು ವಾರ! ನಾನು ಶೂಟಿಂಗ್ ಗೆ ಬಂದಾಗ ನನ್ನ ಅಮ್ಮ ಹಾಗೂ ಜಿಯಾನ್ ಗೆ ಹುಷಾರಿಲ್ಲದೇ ಆಯಿತು. ಈಗ ಪರವಾಗಿಲ್ಲ. ಆ ಸಮಯದಲ್ಲಿ ನನ್ನ ಕುಟುಂಬವೂ ನನಗೆ ತುಂಬಾ ಸಪೋರ್ಟ್ ಮಾಡಿತ್ತು ಮತ್ತು ಶೂಟಿಂಗ್ ನತ್ತ ಗಮನಹರಿಸುವಂತೆಯೂ ಪ್ರೋತ್ಸಾಹಿಸಿತ್ತು” ಎನ್ನುತ್ತಾರೆ ಕೊಡಗಿನ ಕುವರಿ.

