• June 14, 2022

ಕಿರುತೆರೆ “ಸುಂದರಿ” ಯ ನಟನಾ ಜರ್ನಿ

ಕಿರುತೆರೆ “ಸುಂದರಿ” ಯ ನಟನಾ ಜರ್ನಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಂದರಿ ಧಾರಾವಾಹಿಯಲ್ಲಿ ನಾಯಕಿ ಸುಂದರಿಯಾಗಿ ಅಭಿನಯಿಸುತ್ತಿರುವ ಐಶ್ವರ್ಯಾ ಪಿಸ್ಸೆ ಕನ್ನಡ ಮಾತ್ರವಲ್ಲದೇ ಕಸ್ತೂರಿಯಾಗಿ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಪುನರ್ ವಿವಾಹ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಐಶ್ವರ್ಯಾ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.

ಪುನರ್ ವಿವಾಹ ಧಾರಾವಾಹಿಯಲ್ಲಿ ಪೋಷಕ ಪಾತ್ರದ ಮೂಲಕ ವೀಕ್ಷಕರ ಗಮನ ಸೆಳೆದ ಈಕೆ ಮುಂದೆ ಸ್ಟಾರ್ ಸುವರ್ಣ ವಾಹಿನಿಯ ಅನುರೂಪ ಧಾರಾವಾಹಿಯಲ್ಲಿ ನಾಯಕಿ ಮೇಘನಾ ಆಗಿ ಕಾಣಿಸಿಕೊಂಡರು. ಮುದ್ದಾದ ನಟಬೆಯ ಮೂಲಕ ಕಡಿಮೆ ಅವಧಿಯಲ್ಲಿಯೇ ಮನೆ ಮಾತಾದ ಐಶ್ವರ್ಯಾ ಮುಂದೆ ನಟಿಸಿದ್ದು ಪೌರಾಣಿಕ ಧಾರಾವಾಹಿಯಲ್ಲಿ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿರಿಜಾ ಕಲ್ಯಾಣದಲ್ಲಿ ನಾಯಕಿ ಪಾತ್ರಕ್ಕೆ ಜೀವ ತುಂಬಿದ್ದ ಈಕೆ ಮುಂದೆ ಪಾರ್ವತಿಯಾಗಿ ಬದಲಾದರು. ಸ್ಟಾರ್ ಸುವರ್ಣ ವಾಹಿನಿಯ ಸರ್ವ ಮಂಗಳ ಮಾಂಗಲ್ಯೇ ಯಲ್ಲಿ ನಾಯಕಿ ಪಾರ್ವತಿ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಐಶ್ವರ್ಯಾ ಅಭಿನಯಕ್ಕೆ ಫಿದಾ ಆಗದವರಿಲ್ಲ.

ಇನ್ನು ಸಂತಸದ ವರ್ಷದ ವಿಚಾರವೆಂದರೆ ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿಯೂ ತೆಲುಗುನಲ್ಲಿ ಅಗ್ನಿ ಸಾಕ್ಷಿ ಹೆಸರಿನಲ್ಲಿ ತೆರೆ ಕಂಡಿದ್ದು ಅದರಲ್ಲಿಯೂ ಈಕೆ ನಾಯಕಿಯಾಗಿ ನಟಿಸಿದ್ದಾರೆ. ಬೇರೆ ಬೇರೆ ಭಾಷೆಯ ಒಂದೇ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಈ ಸುವರ್ಣಾವಕಾಶ ಪಡೆದಿರುವ ಆಕೆ ಅಲ್ಲೂ ವೀಕ್ಷಕರ ಮುದ್ದಿನ ನಟಿಯಾಗಿದ್ದಾರೆ.

ಇನ್ನು ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಸ್ತೂರಿ ಧಾರಾವಾಹಿಯಲ್ಲಿ ಡಾಕ್ಟರ್ ಆಗಿ ಅಭಿನಯಿಸಿರುವ ಐಶ್ವರ್ಯಾ ಪಿಸ್ಸೆ ಹಿರಿತೆರೆಯಲ್ಲೂ ಮಿಂಚಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದಲ್ಲಿ ಯಶ್ ತಂಗಿಯಾಗಿ ನಟಿಸಿರುವ ಐಶ್ವರ್ಯಾ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದು ಹಿರಿತೆರೆಗೆ ಬರುತ್ತಾರಾ ಎಂದು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *