• May 25, 2022

ಹೇಗಿರಲಿದೆ ಶಿವಣ್ಣ-ಭಟ್ಟರ ಮುಂದಿನ ಸಿನಿಮಾ??

ಹೇಗಿರಲಿದೆ ಶಿವಣ್ಣ-ಭಟ್ಟರ ಮುಂದಿನ ಸಿನಿಮಾ??

‘ವಿಕಟಕವಿ’ ಯೋಗರಾಜ್ ಭಟ್ ಅವರು ಕನ್ನಡದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಸುಮಾರು ಎರಡು ದಶಕಗಳಿಂದ ಕನ್ನಡಿಗರನ್ನ ರಂಜಿಸುತ್ತಾ ಬಂದಿರೋ ಭಟ್ರು, ಅಂದಿನಿಂದ ಇಂದಿನವರೆಗೂ ತಮ್ಮದೇ ವಿಶೇಷ ಶೈಲಿಯನ್ನೂ, ವಿಶೇಷ ಅಭಿಮಾನಿಗಳನ್ನೂ ಹೊಂದಿದ್ದಾರೆ. ಮಾತಿನಲ್ಲೇ ಮನೆ ಕಟ್ಟಿ, ಮಾತಿನಲ್ಲೇ ಪ್ರೀತಿ ಕಟ್ಟಿ, ಅದೇ ಮಾತಿನಲ್ಲೇ ಅತಿಸೂಕ್ಷ್ಮ ವಿಷಯಗಳನ್ನು ಹೇಳುವಂತಹ ಭಟ್ಟರ ಸಿನಿಮಾಗಳು ಮನಸ್ಸಿಗೆ ಮುದ ನೀಡುವಂತದ್ದು.ಇದೀಗ ಯೋಗರಾಜ್ ಭಟ್ ಅವರು ತಮ್ಮ ಶೈಲಿಗೂ ಭಿನ್ನವಾದ ಹೊಸ ಚಿತ್ರವೊಂದನ್ನು ಆರಂಭಿಸಲಿದ್ದಾರೆ.

ಈ ಹೊಸ ಚಿತ್ರ ಕರುನಾಡ ಚಕ್ರವರ್ತಿ ಶಿವಣ್ಣನ ಜೊತೆ ಮಾಡಲಿದ್ದಾರೆ. ವಿಶೇಷವೆಂದರೆ ಮೊದಲ ಬಾರಿಗೆ ಯೋಗರಾಜ್ ಭಟ್ ಅವರು ಆಕ್ಷನ್-ಡ್ರಾಮಾ ರೀತಿಯ ಕಥೆಯೊಂದನ್ನ ತೆರೆಮೇಲೆ ತರಲಿದ್ದಾರೆ. ಯೋಗರಾಜ್ ಭಟ್ಟರ ಖಾತೆಯಲ್ಲಿ ಸದ್ಯ ಎರಡು ಚಿತ್ರಗಳಿವೆ. ಭಟ್ರು ಹಾಗು ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯ ಬ್ಲಾಕ್ ಬಸ್ಟರ್ ಚಿತ್ರ ‘ಗಾಳಿಪಟ’ವನ್ನ ‘ಗಾಳಿಪಟ 2’ ಎಂಬ ಹೆಸರಿನಿಂದ ಮರಳಿ ತರಲು ಹೊರಟಿದ್ದಾರೆ ಭಟ್ಟರು. ಗಣೇಶ್, ದಿಗಂತ್ ಹಾಗು ಪವನ್ ಕುಮಾರ್ ಅಭಿನಯದ ಈ ಸಿನಿಮಾ ಆಗಸ್ಟ್ 12ರಂದು ಬಿಡುಗಡೆಯಾಗಲಿದೆ. ಎರಡನೆಯದಾಗಿ ಯಶಸ್ ಸೂರ್ಯ ಅಭಿನಯದಲ್ಲಿ ‘ಗರಡಿ’ ಎಂಬ ಚಿತ್ರವನ್ನು ಭಟ್ರು ಮಾಡುತ್ತಿದ್ದು, ಸದ್ಯ ಅದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಈ ಹೊಸ ಸಿನಿಮಾ ಸೆಟ್ಟೇರಲಿದೆ.

ಶಿವಣ್ಣ ಜೊತೆ ಪ್ರಭುದೇವ!!
ಈ ಮಾಸ್ ಆಕ್ಷನ್-ಡ್ರಾಮಾದಲ್ಲಿ ಶಿವಣ್ಣ ಜೊತೆಗೆ ಪ್ರಭುದೇವ ಕೂಡ ನಟಿಸಲಿದ್ದಾರಂತೆ. ಈಗಾಗಲೇ ಮಾತುಕತೆ ಮುಗಿದಿದ್ದು, ಚಿತ್ರೀಕರಣದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ಅವರು ಬಂಡವಾಳ ಹೂಡುತ್ತಿರುವುದರಿಂದ, ತುಂಬಾ ದೊಡ್ಡ ಮಟ್ಟದಲ್ಲೇ ಮೂಡಿಬರಲಿದೆ. ಈ ಬಗ್ಗೆ ಭಟ್ಟರು ಬಿಚ್ಚಿಟ್ಟ ಒಂದಿಷ್ಟು ಗುಟ್ಟುಗಳು ಹೀಗಿವೆ. “ಶಿವರಾಜ್ ಕುಮಾರ್ ಅವರ ಜೊತೆಗೆ ಪ್ರಭುದೇವ ಅವರು ಸಿನಿಮಾದಲ್ಲಿ ನಟಿಸುವುದು ಖಾತ್ರಿಯಾಗಿದೆ. ‘ರಾಕ್ಲೈನ್ ಪ್ರೊಡಕ್ಷನ್ಸ್’ ಬ್ಯಾನರ್ ನಲ್ಲಿ ಚಿತ್ರ ಮೂಡಿಬರಲಿದ್ದು, ದೊಡ್ಡ ಮಟ್ಟದಲ್ಲೇ ನಿರ್ಮಾಣವಾಗಲಿದೆ. ಈಗಂತೂ ಯಾವುದೇ ದೊಡ್ಡ ಸಿನಿಮಾ ಸೇಟ್ಟೇರಿದರು ಪಾನ್-ಇಂಡಿಯಾ ಸಿನಿಮಾನ ಎಂದೇ ಜನ ಕೇಳೋದು. ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ಆಗಿರುವ ಈ ಸಿನಿಮಾ ಕೂಡ ಪಾನ್-ಇಂಡಿಯಾ ಮಟ್ಟದಲ್ಲೇ ಬಿಡುಗಡೆಯಗುತ್ತದೆ. ಪಾತ್ರವರ್ಗ ಹಾಗು ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಸದ್ಯದಲ್ಲೇ ಹೇಳುತ್ತೇವೆ” ಎಂದಿದ್ದಾರೆ ಭಟ್ಟರು.

Leave a Reply

Your email address will not be published. Required fields are marked *