• July 6, 2022

ಮತ್ತೆ ಕಿರುತೆರೆಗೆ ಸುಧಾರಾಣಿ

ಮತ್ತೆ ಕಿರುತೆರೆಗೆ ಸುಧಾರಾಣಿ

ಆನಂದ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಎಲ್ಲರ ಮನ ಗೆದ್ದ ಸುಧಾರಾಣಿ ಯಾರಿಗೆ ತಾನೇ ಗೊತ್ತಿಲ್ಲ? ತನ್ನ ಸಿನಿಮಾಗಳ ಮೂಲಕ ಎಲ್ಲರನ್ನು ರಂಜಿಸಿರುವ ಸುಧಾರಾಣಿ ಇದೀಗ ಕನ್ನಡದ ‘ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ ಪೋಷಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು, ಇದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.
ಅಂದಹಾಗೆ ಶ್ರೀರಸ್ತು ಶುಭಮಸ್ತು ಪ್ರಸಾರವಾಗುತ್ತಿರುವುದು ಜೀ ಕನ್ನಡ ವಾಹಿನಿಯಲ್ಲಿ.

ಜೀ ಕನ್ನಡ ವಾಹಿನಿಯು ಸದಾ ಒಂದಲ್ಲೊಂದು ಧಾರಾವಾಹಿಗಳ ಮೂಲಕ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ಮನರಂಜಿಸುತ್ತಾ ಬಂದಿದೆ. ಅದು ಕೌಟುಂಬಿಕವಾಗಿರಬಹುದು, ಸಾಮಾಜಿಕ ಪೌರಾಣಿಕ ಕಥೆಯೂ ಆಗಿರಬಹುದು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಹೊಸದೊಂದು ಧಾರಾವಾಹಿ ಪ್ರಾರಂಭವಾಗಲಿದೆ. ಈ ಧಾರಾವಾಹಿಯಲ್ಲಿ ಚಂದನವನದ ಸುಂದರಿ ಡಾ.ಸುಧಾರಾಣಿ ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಅದ್ಬುತ ನಟನೆಯಿಂದ ಪ್ರೇಕ್ಷಕರ ಪ್ರೀತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಸುಧಾರಾಣಿ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ ಪೋಷಕ ನಟಿಯಾಗಿ ಸುಧಾರಾಣಿ ಅಭಿನಯಿಸಲಿದ್ದಾರೆ.
ಈಗಾಗಲೇ ಝೀ ವಾಹಿನಿಯು ಪ್ರೋಮೋವನ್ನು ಹರಿ ಬಿಟ್ಟಿದ್ದು ಪ್ರೇಕ್ಷಕರು ಧಾರವಾಹಿಗಾಗಿ ಕಾತರರಾಗಿದ್ದಾರೆ. ಅಂದ ಹಾಗೆ ಸುಧಾರಾಣಿಯವರು ಈ ಹಿಂದೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ಧಾರಾವಾಹಿಯ ನಾಯಕ ನಟನಾಗಿ ನಮ್ಮನೆ ಯುವರಾಣಿ ಖ್ಯಾತಿಯ ಅನಿಕೇತ್ ಅಲಿಯಾಸ್ ದೀಪಕ್ ಬಿ.ಆರ್ ಗೌಡ ನಟಿಸುತ್ತಿದ್ದಾರೆ. ನಮ್ಮನೆ ಯುವರಾಣಿ ತಂಡದಿಂದ ಹೊರ ಬಂದ ಬಳಿಕ ಇದು ಅವರ ಮೊದಲ ಪ್ರಾಜೆಕ್ಟಾಗಿದೆ. ಇನ್ನು ನಾಯಕಿ ಪಾತ್ರವನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಬೆಟ್ಟದ ಹೂವು ಧಾರಾವಾಹಿಯಲ್ಲಿ ದೀಪ್ತಿಯಾಗಿ ಅಭಿನಯಿಸುತ್ತಿರುವ ಚಂದನಾ ರಾಘವೇಂದ್ರ ನಿರ್ವಹಿಸಲಿದ್ದಾರೆ. ಈ ಧಾರಾವಾಹಿ ನೀಲಾ ಪ್ರೊಡಕ್ಷನ್ ಮುಖಾಂತರ ಬರಲಿದೆ.

ತನ್ನ ಕುಟುಂಬವೇ ತನ್ನ ಪ್ರಪಂಚ ಎಂದು ಬದುಕುತ್ತಿರುವ ಹೆಣ್ಣು ಮಕ್ಕಳ ಜೀವನದ ಕುರಿತಂತೆ ಧಾರಾವಾಹಿಯ ಕಥೆ ಸುತ್ತುವರಿಯುತ್ತದೆ ಎಂದು ವಾಹಿನಿಯು ತನ್ನ ಪ್ರೋಮೋದಲ್ಲಿ ತಿಳಿಸಿದೆ. ಪ್ರೋಮೋದಲ್ಲಿ ಕಾಣಿಸಿರುವಂತೆ ನಟಿ ಸುಧಾರಾಣಿ ಅವರು ಧಾರಾವಾಹಿಯಲ್ಲಿ ‘ತುಳಸಿ’ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅದೇ ರೀತಿ ಒಂದು ಹೆಣ್ಣು ತಾಯಿಯಾಗಿ, ಸೊಸೆಯಾಗಿ ಹಾಗೂ ಹಲವಾರು ಪಾತ್ರಗಳಲ್ಲಿ ಹೇಗೆ ನಿಭಾಯಿಸಿಕೊಂಡು ಹೋಗುತ್ತಾಳೆ ಎನ್ನುವ ಬಗ್ಗೆ ಪ್ರೋಮೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ಝೀ ಮರಾಠಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ‘ಅಗ್ಗಾಬಾಯಿ ಸನ್ಬಾಯಿ’ ಎಂಬ ಧಾರಾವಾಹಿಯ ರಿಮೇಕ್ ಆಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯ‌ ಕಥೆ ಇರಲಿದೆ ಎಂದು ತಿಳಿದು ಬಂದಿದೆ. ಮರಾಠಿ ಜನರ ಮನಗೆದ್ದಿರೋ ಈ ಧಾರಾವಾಹಿ ಕನ್ನಡಿಗರನ್ನು ಹೇಗೆ ಸೆಳೆಯುತ್ತದೆಯೆಂದು ನೋಡಬೇಕಿದೆ. ಈ ಬಗ್ಗೆ ಧಾರಾವಾಹಿಯು ಪ್ರಸಾರಗೊಂಡ ಮೇಲಷ್ಟೇ ತಿಳಿಯಬಹುದು‌. ಧಾರಾವಾಹಿಯು ಪ್ರಸಾರಗೊಳ್ಳುವ ಸಮಯದ ಬಗ್ಗೆ ಇನ್ನೂ ವಾಹಿನಿಯು ಮಾಹಿತಿ ನೀಡಿಲ್ಲ. ಒಟ್ಟಿನಲ್ಲಿ ಸುಧಾರಾಣಿ ಮತ್ತೆ ಕಿರುತೆರೆಗೆ ಬರುತ್ತಿರುವುದು ವಿಶೇಷ.