• May 4, 2022

ಶಾರುಖ್ ಖಾನ್ ಜೊತೆಗೆ ನಟಿಸಬೇಕು ಎಂದ ಗೂಗ್ಲಿ ಬೆಡಗಿ

ಶಾರುಖ್ ಖಾನ್ ಜೊತೆಗೆ ನಟಿಸಬೇಕು ಎಂದ ಗೂಗ್ಲಿ ಬೆಡಗಿ

ಕೃತಿ ಕರಬಂಧ ಕನ್ನಡ ಸಿನಿಪ್ರಿಯರಿಗೆ ತುಂಬಾ ಪರಿಚಿತ ಮುಖ. ಚಿರು ಸಿನಿಮಾದ ಮಧು ಆಗಿ ಚಂದನವನದಲ್ಲಿ ಮೋಡಿ ಮಾಡಿದ ಕೃತಿ ಕರಬಂಧ ಗೂಗ್ಲಿ ಸಿನಿಮಾದ ಸ್ವಾತಿ ಪಾತ್ರದ ಮೂಲಕ ಕರುನಾಡಿನಾದ್ಯಂತ ಮನೆ ಮಾತಾದರು. ಗೂಗ್ಲಿ ಸಿನಿಮಾ ತೆರೆ ಕಂಡು ಬರೋಬ್ಬರಿ ಒಂಭತ್ತು ವರ್ಷಗಳೇ ಕಳೆದರೂ, ಕೃತಿ ಕರಬಂಧ ಎಂದಾಗ ನೆನಪಾಗುವುದು ಅದೇ ಸಿನಿಮಾ. ಅಷ್ಟರ ಮಟ್ಟಿಗೆ ಆ ಸಿನಿಮಾ, ಕೃತಿ ಪಾತ್ರ ವೀಕ್ಷಕರನ್ನು ಸೆಳೆದುಬಿಟ್ಟಿತ್ತು.

ಚಿರು, ಪ್ರೇಮ್ ಅಡ್ಡಾ, ಗಲಾಟೆ, ಗೂಗ್ಲಿ, ತಿರುಪತಿ ಎಕ್ಸ್‌ಪ್ರೆಸ್, ಸೂಪರ್ ರಂಗ, ಬೆಳ್ಳಿ, ಮಿಂಚಾಗಿ ನೀನು ಬರಲು, ಸಂಜು ವೆಡ್ಸ್ ಗೀತಾ 2, ಮಾಸ್ತಿ ಗುಡಿ, ದಳಪತಿ ಹೀಗೆ ಬೆರಳೆಣಿಕೆಯಷ್ಟು ಕನ್ನಡ ಸಿನಿಮಾಗಳ ಜೊತೆಗೆ ತಮಿಳು, ತೆಲುಗು ಸಿನಿಮಾಗಳಲ್ಲಿ ನಟನಾ ಛಾಪನ್ನು ಪಸರಿಸಿದ್ದಾರೆ ಕೃತಿ ಕರಬಂಧ. ಬಹುಭಾಷಾ ತಾರೆಯಾಗಿ ಗುರುತಿಸಿಕೊಂಡಿರುವ ಕೃತಿ ಹಿಂದಿ ಸಿನಿಮಾದಲ್ಲಿ ನಟಿಸಿದ್ದೇ ಹೆಚ್ಚು.

ಇದೇ ಮೊದಲ ಬಾರಿಗೆ ಮಾಲಿವುಡ್ ಗೂ ಕಾಲಿಟ್ಟಿರುವ ಕೃತಿ ಕರಬಂಧ ಅವರಿಗೆ ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರೊಂದಿಗೆ ತೆರೆ ಹಂಚಿಕೊಳ್ಳಬೇಕು, ಶಾರುಖ್ ಅವರ ಸಿನಿಮಾದಲ್ಲಿ ನಟಿಸಬೇಕು ಎಂಬ ಮನಸ್ಸಾಗಿದೆ. ಬಾಲ್ಯದಿಂದಲೂ ಶಾರುಖ್ ಖಾನ್ ಅಭಿಮಾನಿಯಾಗಿರುವ ಕೃತಿ ಅವರ ಅಭಿನಯದ ಸಿನಿಮಾಗಳನ್ನು ತಪ್ಪದೇ ನೋಡುತ್ತಾರೆ.

ವರ್ಷಗಳ ಹಿಂದೆ ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಇರುವಂತಹ ಪ್ರೆಂಡ್ ಶಿಪ್ ಬ್ಯಾಂಡ್ ತಂದು ಕಟ್ಟಿಕೊಂಡಿರುವ ಕೃತಿ ಕರಬಂಧ ಲಾಕ್ ಡೌನ್ ನಲ್ಲಿ ಮನೆ ಮಂದಿಯ ಜೊತೆ ಕುಳಿತು ಬಾದ್ ಶಾ ಸಿನಿಮಾ ನೋಡಿ ಕಣ್ತುಂಬಿಸಿಕೊಂಡಿದ್ದಾರೆ. ಇದರ ಜೊತೆಗೆ “ನಾನು ಖಂಡಿತವಾಗಿ ಒಂದಲ್ಲ ಒಂದು ದಿನ ಶಾರುಖ್ ಖಾನ್ ಅವರೊಂದಿಗೆ ನಟಿಸುತ್ತೇನೆ” ಎಂದು ಮನದ ಇಂಗಿತವನ್ನು ಒತ್ತಿ ಒತ್ತಿ ಹೇಳಿರುವ ಕೃತಿ ಆಸೆ ಬಹುಬೇಗನೇ ಈಡೇರಲಿ. ಎಂಬುದೇ ಅಭಿಮಾನಿಗಳ ಹಾರೈಕೆ.

Leave a Reply

Your email address will not be published. Required fields are marked *