• March 19, 2022

‘ಜೇಮ್ಸ್’ ಕಿರೀಟಕ್ಕೆ ಇದೀಗ ಇನ್ನೊಂದು ಗರಿ.

‘ಜೇಮ್ಸ್’ ಕಿರೀಟಕ್ಕೆ ಇದೀಗ ಇನ್ನೊಂದು ಗರಿ.

ಬಿಡುಗಡೆಗೂ ಮುನ್ನವೇ ದಾಖಲೆಗಳ ಸರಮಾಲೆಯನ್ನ ಪಡೆದಂತ ಸಂಭ್ರಮದಲ್ಲಿ ಬೆಳ್ಳಿತೆರೆ ಮೇಲೆ ಬಂದ ಚಿತ್ರ ‘ಜೇಮ್ಸ್’. ಅಪ್ಪು ಅಗಲಿಕೆಯಿಂದ ಕುಸಿದುಹೋಗಿದ್ದ ಪ್ರತಿಯೊಬ್ಬ ಅಭಿಮಾನಿಯನ್ನು ಹುರಿದುಂಬಿಸಲು ಬಂದಂತಿತ್ತು ‘ಜೇಮ್ಸ್’. ಬಿಡುಗಡೆಗೂ ಮುನ್ನದ ಟಿಕೆಟ್ ಬುಕಿಂಗ್ ನಿಂದ ಹಿಡಿದು ಬಿಡುಗಡೆಯ ನಂತರ ಹರಿದುಬಂದ ಜನಸಾಗರದವರೆಗೆ ಈ ಚಿತ್ರದ ಪ್ರತಿಯೊಂದು ಅಂಶ ಕೂಡ ಒಂದೊಂದು ದಾಖಲೆಗೆ ಸಾಕ್ಷಿಯಾಯ್ತು. ‘ಕರ್ನಾಟಕ ರತ್ನ’ ಡಾ| ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿ ನಾಯಕನಟನಾಗಿ ಕಣ್ತುಂಬಿಕೊಳ್ಳಲು ಕರ್ನಾಟಕದೆಲ್ಲೆಡೆ ಅವರು-ಇವರೆನ್ನದೆ ಎಲ್ಲರು ಸೇರುಟ್ಟಿದ್ದಾರೆ. ಈ ಯಶಸ್ಸಿನ ಕಿರೀಟಕ್ಕೆ ಇದೀಗ ಹೊಸತೊಂದು ಗರಿ ಸೇರುತ್ತಿದೆ.

ಒಂದು ಸಿನಿಮಾಗೆ ಬೆಳ್ಳಿತೆರೆ ಮೇಲಿನ ಓಟ ಎಷ್ಟು ಮುಖ್ಯವೋ ಕಿರುತೆರೆಗಳಲ್ಲಿನ ಆಟವು ಕೂಡ ಅಷ್ಟೇ ಮುಖ್ಯ. ಸದ್ಯ ‘ಜೇಮ್ಸ್’ ಚಿತ್ರದ ಸ್ಯಾಟೆಲೈಟ್ ಹಕ್ಕುಗಳು ಮಾರಾಟವಾಗಿದ್ದು, ಬಜಾರಿನಲ್ಲಿನ ಬೇಡಿಕೆಯಿಂದ ‘ಜೇಮ್ಸ್’ ಮುಗಿಲಿನೆತ್ತರಕ್ಕೆ ಏರುತ್ತಿದೆ. ಮೂಲಗಳ ಪ್ರಕಾರ ಚಿತ್ರದ ಸ್ಯಾಟೆಲೈಟ್ಹಕ್ಕನ್ನು ಸ್ಟಾರ್ ಸುವರ್ಣ ವಾಹಿನಿಯವರು ಬರೋಬ್ಬರಿ 13.80 ಕೋಟಿಗೆ ಖರೀದಿಸಿದ್ದಾರೆ. ಇದು ಈವರೆಗಿನ ಅತ್ಯಧಿಕವಾದ ‘ಕೆ ಜಿ ಎಫ್:ಚಾಪ್ಟರ್ 1’ನ 6ಕೋಟಿಗಿಂತ ದುಪ್ಪಟ್ಟರಷ್ಟಾಗಿದೆ. ಇನ್ನು ಒಟಿಟಿಗಾಗಿ ‘ಸೋನಿ ಡಿಜಿಟಲ್’ ಸಂಸ್ಥೆ 40ಕೋಟಿ ಹಣವನ್ನ ಸುರಿದಿದೆ ಎನ್ನಲಾಗಿದೆ. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ‘ಜೇಮ್ಸ್’ ಅಬ್ಬರಿಸುತಿದ್ದು, ಅಲ್ಲಿನ ಸ್ಯಾಟೆಲೈಟ್ ರೈಟ್ಸ್ ಗಳು ಕೂಡ ಯಾವುದಕ್ಕೂ ಕಡಿಮೆ ಇಲ್ಲ. ತೆಲುಗಿನ ‘ಮಾ ಟಿವಿ’ 5.70 ಕೋಟಿ ಕೊಟ್ಟರೆ, ತಮಿಳಿನಲ್ಲಿ ‘ಸನ್ ನೆಟ್ವರ್ಸೋನಿಗೆ 5.17 ಕೋಟಿಯಂತೆ. ಇನ್ನು ಮಲಯಾಳಂನವರು 1.2 ಕೋಟಿಗೆ, ಭೋಜಪುರಿಯವರು 5.50 ಕೋಟಿ ಕೊಟ್ಟು ಖರೀದಿಸಿದ್ದಾರೆ. ಹಿಂದಿ ಭಾಷೆಯಲ್ಲಿ ‘ಸೋನಿ ನೆಟ್ವರ್ಕ್’ 2.70 ಕೋಟಿಗೆ ಕೊಂಡುಕೊಂಡಿದೆ.

‘ಭರ್ಜರಿ’ ಖ್ಯಾತಿಯ ಚೇತನ್ ಕುಮಾರ್ ‘ಜೇಮ್ಸ್’ ಚಿತ್ರದ ಸೃಷ್ಟಿಕರ್ತರು. ಕಿಶೋರ್ ಪಾತಿಕೊಂಡ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ಹಾಗೆ ವಿ. ಹರಿಕೃಷ್ಣ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಅಪ್ಪು ಅವರ ಜೊತೆಗೆ ಶಿವಣ್ಣ, ರಾಘಣ್ಣ ಮಾತ್ರವಲ್ಲದೆ ಶರತ್ ಕುಮಾರ್, ಶ್ರೀಕಾಂತ್, ಅವಿನಾಶ್, ರಂಗಾಯಣ ರಘು ಮುಂತಾದ ದೊಡ್ಡ ಕಲಾವಿದರ ದಂಡೆ ಚಿತ್ರದಲ್ಲಿದೆ.

Leave a Reply

Your email address will not be published. Required fields are marked *