• May 25, 2022

ಮಹತ್ಕಾರ್ಯದ ಮೂಲಕ ಸುದ್ದಿಯಲ್ಲಿರುವ ಇಬ್ಬನಿ ಶೆಟ್ಟಿ

ಮಹತ್ಕಾರ್ಯದ ಮೂಲಕ ಸುದ್ದಿಯಲ್ಲಿರುವ ಇಬ್ಬನಿ ಶೆಟ್ಟಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಭಾಗವಹಿಸಿದ್ದ ಹಿರಿತೆರೆ ನಟ ಪ್ರಮೋದ್ ಶೆಟ್ಟಿ ಹಾಗೂ ಕಿರುತೆರೆ ನಟಿ ಸುಪ್ರೀತಾ ಶೆಟ್ಟಿ ಮಗಳು ಇಬ್ಬನಿ ಶೆಟ್ಟಿ ಮಹತ್ಕಾರ್ಯದ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು, ಇತ್ತೀಚೆಗಷ್ಟೇ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಪುಟ್ಟ ಹುಡುಗಿ ಇಬ್ಬನಿ ತನ್ನ ಕೂದಲನ್ನು ದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನು ದಾನ ಮಾಡಿರುವ ಈ ಪುಟಾಣಿ ಉಳಿದ ಹೆಣ್ಮಕ್ಕಳಿಗೂ ಮಾದರಿಯಾಗಿ ಬಿಟ್ಟಿದ್ದಾಳೆ. ಮಾತ್ರವಲ್ಲ ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಕೆ ಅಂತಹ ಆಲೋಚನೆ ಮಾಡಿರುವುದು ಖುಷಿ ತಂದಿದೆ. ಮಾತ್ರವಲ್ಲ ಅವಳ ಕಾರ್ಯಕ್ಕೆ ಮೆಚ್ಚುಗೆಯನ್ನು ಕೂಡಾ ವ್ಯಕ್ತಪಡಿಸುತ್ತಾರೆ.

ಅಂದ ಹಾಗೇ ಇಬ್ಬನಿ ಶೆಟ್ಟಿ ಅವರಿಗೆ ನಟಿ, ನಿರೂಪಕಿ ಅನುಪಮಾ ಗೌಡ ಅವರೇ ಸ್ಫೂರ್ತಿ. ಇತ್ತೀಚೆಗೆ ಅನುಪಮಾ ಗೌಡ ಅವರು ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನು ದಾನ ನೀಡಿದ್ದರು. ಅದರಿಂದ ಪ್ರೇರಣೆ ಪಡೆದ ಇಬ್ಬನಿ ತನ್ನ ಕೂದಲನ್ನು ಕೂಡಾ ದಾನ ಮಾಡಿದ್ದಾಳೆ.

ಇದರ ಬಗ್ಗೆ ಫೇಸ್ ಬುಕ್ ನಲ್ಲಿ ಸುಪ್ರೀತಾ ಶೆಟ್ಟಿ ಬರೆದುಕೊಂಡಿದ್ದಾರೆ‌. “
ಇನ್‌ಸ್ಟಾಗ್ರಾಮ್‌ನಲ್ಲಿ ಅನುಪಮಾ ಗೌಡ ಪ್ರೊಫೈಲ್ ನೋಡ್ತಾ ಇಬ್ಬನಿ ಕೇಳಿದ್ಲು, ಅಮ್ಮಾ.. ಅನುಪಮಾ ಆಂಟಿ ಯಾಕೆ ಕೂದಲು ಕಟ್ ಮಾಡಿಸಿಕೊಂಡಿದ್ದಾರೆ ಅಂತ. ಕ್ಯಾನ್ಸರ್ ರೋಗಿಗೆ ಡೊನೇಟ್ ಮಾಡೋಕೆ ಅಂತ ನಾನು, ಅವಳಿಗೆ ಅರ್ಥ ಆಗೋಹಾಗೆ ಹೇಳಿ ಸುಮ್ಮನಾದೆ. ನನ್ನ ಮಾತ್ ಕೇಳಿ ಆಕೆ, ಅಮ್ಮಾ.. ಈ ಹುಟ್ಟು ಹಬ್ಬಕ್ಕೆ ನಾನು, ನನ್ನ ತಲೆಗೂದಲನ್ನು ಕ್ಯಾನ್ಸರ್ ರೋಗಿಗೆ ಡೊನೇಟ್ ಮಾಡ್ತೀನಿ ಅಂತ ವಿಶ್ವಾಸದಿಂದ ಹೇಳಿದ್ಲು. ಇಬ್ಬನಿಯ ಈ ಮಾತು ಕೇಳಿ ಒಂದ್ ಕ್ಷಣ ನಾನು ಅವಕ್ಕಾದೆ… ಆಕೆಯ ಇಚ್ಛೆಯಂತೆ ಈ ಸದುದ್ದೇಶಕ್ಕಾಗಿ ಆಕೆಯ ಕೂದಲನ್ನು ದಾನ ಮಾಡಿದ್ವಿ” ಎಂದು ಸುಪ್ರೀತಾ ಬರೆದುಕೊಂಡಿದ್ದಾರೆ‌.

ಮಾತ್ರವಲ್ಲ ಇದರ ಜೊತೆಗೆ “ಚಿಕ್ಕ ಮಕ್ಕಳು ಅಂತ ನಾವು ಅನ್ಕೊಂಡರೆ ಆಲೋಚನೆಯಲ್ಲಿ ಅವರು ನಮಗಿಂತ ಎಷ್ಟು ದೊಡ್ಡವರು ಆಗಿರುತ್ತಾರೆ. ಇವತ್ತು ಇಬ್ಬನಿನಾ ನೋಡಿದ್ರೆ ಆಕೆಯಿಂದ ನಾನು ಕಲಿಯೋದು ಬಹಳಷ್ಟಿದೆ ಅನ್ನಿಸ್ತು, ಆಕೆಯ ಮೇಲಿನ ಪ್ರೀತಿ, ಗೌರವ ನೂರ್ಮಡಿಸಿತು. ಸದ್ದಿಲ್ಲದೆ ಪ್ರೇರಣೆ ನೀಡಿದ ಅನುಪಮಾ ಗೌಡಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲೇಬೇಕು” ಎಂದಿರುವ ಸುಪ್ರೀತಾ ಅನುಪಮಾ ಗೌಡ ಅವರಿಗೆ ಧನ್ಯವಾದ ಹೇಳಿದ್ದಾರೆ.

Leave a Reply

Your email address will not be published. Required fields are marked *