- July 4, 2022
ವಿಭಿನ್ನವಾದ ಪ್ರಶಸ್ತಿ ಪಡೆದ ಹರ್ಷಿಕಾ ಪೂಣಚ್ಚ

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ತೆರೆಯ ಮೇಲೆ ಮಾತ್ರ ನಾಯಕಿಯಾದವರಲ್ಲ. ತೆರೆಯ ಹಿಂದೆಯೂ ಕೂಡಾ ಅವರು ನಾಯಕಿಯೇ. ಕೊರೊನಾ ಅವಧಿಯಲ್ಲಿ ತಮ್ಮ ಸಾಮಾಜಿಕ ಕಾರ್ಯದ ಮೂಲಕ ಹಲವು ರೀತಿಯಲ್ಲಿ ಸಹಾಯ ಮಾಡಿದವರು. ಭುವನಂ ಸಂಸ್ಥೆಯ ಮೂಲಕ ನಟ ಭುವನ್‌ಗೆ ಹರ್ಷಿಕಾ ಸಾಥ್ ನೀಡಿದ್ದರು. ಈಗ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಹರ್ಷಿಕಾ ಪೂಣಚ್ಚ ಮುಡಿಗೇರಿಸಿಕೊಂಡಿದ್ದಾರೆ.

ಬೆಳ್ಳಿಪರದೆಯಲ್ಲಿ ಸ್ಟಾರ್ ಆಗಿ ಮಿಂಚುವವರೆಲ್ಲಾ ನಿಜ ಜೀವನದಲ್ಲೂ ಸ್ಟಾರ್ ಆಗಿ ಬದುಕುವುದು ತೀರಾ ವಿರಳ. ಆದರೆ ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ನಿಜ ಜೀವನದಲ್ಲೂ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಹಲವರಿಗೆ ನೆರವಾಗಿದ್ದಾರೆ.


ಭುವನಂ ಸಂಸ್ಥೆಯ ಮೂಲಕ ಅದೆಷ್ಟೋ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಾರೆ. ಇದೀಗ ಇವರ ಸಮಾಜಪರ ಕಾರ್ಯಕ್ಕೆ ಮದರ್ ಥೆರೇಸಾ ಪ್ರಶಸ್ತಿ ಒಲಿದು ಬಂದಿದೆ. ಭುವನಂ ಸಂಸ್ಥೆಯ ಪರವಾಗಿ ನಟಿ ಹರ್ಷಿಕಾ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅನ್ನು ಸ್ವೀಕರಿಸಿದ್ದಾರೆ. ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ನಟಿ ಹರ್ಷಿಕಾ ಅವರಿಗೆ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿಯ ಕುರಿತು ಹರ್ಷಿಕಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಟಿಗೆ ಶುಭಹಾರೈಸಿದ್ದಾರೆ. ಭುವನಂ ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳಾಗಲಿ ಎಂದು ಆಶಿಸೋಣ.

