• June 9, 2022

ಕರಾವಳಿ ಕುವರಿ ಅಮಿತಾ ಇನ್ನು ಮುಂದೆ ಮಲೆನಾಡ ಹುಡುಗಿ.‌

ಕರಾವಳಿ ಕುವರಿ ಅಮಿತಾ ಇನ್ನು ಮುಂದೆ ಮಲೆನಾಡ ಹುಡುಗಿ.‌

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ಮಾಣವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಒಲವಿನ ನಿಲ್ದಾಣದಲ್ಲಿ ಮಲೆನಾಡ ಹುಡುಗಿ ತಾರಿಣಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಡುತ್ತಿರುವ ಅಮಿತಾ ಕುಲಾಲ್ ಕರಾವಳಿ ಕುವರಿ.

ಮಲೆನಾಡ ಹುಡುಗಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲು ಬರಲಿರುವ ಅಮಿತಾ ಕುಲಾಲ್ ಅವರು ಕನ್ನಡ ಕಿರುತೆರೆಗೆ ಹೊಸಬರು ಹೊರತು ಕಿರುತೆರೆಗಲ್ಲ! ಈಗಾಗಲೇ ಜೀ ತೆಲುಗು ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ರೌಡಿ ಗಾರಿ ಪೆಳ್ಳಂ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡಿರುವ ಅಮಿತಾ ಕುಲಾಲ್ ಈಗ ತಾರಿಣಿಯಾಗಿ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ಸೃಜನ್ ಲೋಕೇಶ್ ನಟನೆಯ ಹ್ಯಾಪಿ ಜರ್ನಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅಮಿತಾ ಕುಲಾಲ್ ಮುಂದೆ ಗಿಫ್ಟ್ ಬಾಕ್ಸ್ ಸಿನಿಮಾದಲ್ಲಿಯೂ ನಾಯಕಿಯಾಗಿ ಸೈ ಎನಿಸಿಕೊಂಡರು. ಇದೀಗ ಕಿರುತೆರೆಗೆ ಕಾಲಿಟ್ಟುರುವ ಈಕೆ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿದ್ದು ಮಾಡೆಲಿಂಗ್ ಮೂಲಕ.

ಚಿಕ್ಕಂದಿನಿಂದಲೂ ಮಾಡೆಲಿಂಗ್ ನತ್ತ ವಿಶೇಷ ಒಲವು ಮೂಡಿಸಿಕೊಂಡಿದ್ದ ಅಮಿತಾ ಅವರ ಕನಸಿಗೆ ರೆಕ್ಕೆ ಬರುವ ಹಾಗೇ ಮಾಡಿದ್ದು ಟಿವಿ. ಟಿವಿಯಲ್ಲಿ ಬರುತ್ತಿದ್ದ ಫ್ಯಾಷನ್ ಶೋಗಳನ್ನು ನೋಡಿ ಅದರಿಂದ ಪ್ರೇರಣೆಗೆ ಒಳಗಾಗುತ್ತಿದ್ದ ಅಮಿತಾ ಕುಲಾಲ್ ತಾವು ಕೂಡಾ ನಾನಾ ನಮೂನೆಯ ಡ್ರೆಸ್ ಧರಿಸಿ ಕ್ಯಾಟ್ ವಾಕ್ ಮಾಡುತ್ತಿದ್ದರು.

ಪದವಿಯ ನಂತರ ಮಾಡೆಲ್ ಆಗುವ ಧೃಡ ನಿರ್ಧಾರ ಮಾಡಿದ ಅಮಿತಾ ಮುಂಬೈಗೆ ಹೋಗಿ ಮಾಡೆಲಿಂಗ್ ನ ಆಳ ಅಗಲ ತಿಳಿದುಕೊಂಡರು. ಫ್ಯಾಷನ್ ಶೋಗಳಲ್ಲಿ ಮಿಂಚಿದರು. ಇದರ ಜೊತೆಗೆ ರೂಪದರ್ಶಿಯಾಗಿ ಕಮಾಲ್ ಮಾಡಿರುವ ಈಕೆ
ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಮಧುರೈ ಸಿಲ್ಕ್ಸ್, ಸೂರತ್ ಬ್ರಾಂಡ್, ಹೈದರಬಾದ್ ಸಾರೀಸ್ ಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ.

ಇಂತಿಪ್ಪ ಕುಡ್ಲದ ಕುವರಿ ಇದೀಗ ತಾರಿಣಿಯಾಗಿ ಕಿರುತೆರೆಗೆ ಮರಳಲಿದ್ದು ವೀಕ್ಷಕರ ಮನ ಸೆಳೆಯುತ್ತಾರಾ ಎಂದು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *