• July 13, 2022

‘ಲಕ್ಕಿಮ್ಯಾನ್’ನಿಂದ ‘ಅಪ್ಪು’ ಎಂಬ ದೇವರ ಮರುದರ್ಶನ.

‘ಲಕ್ಕಿಮ್ಯಾನ್’ನಿಂದ ‘ಅಪ್ಪು’ ಎಂಬ ದೇವರ ಮರುದರ್ಶನ.

‘ಕರ್ನಾಟಕ ರತ್ನ’, ಪವರ್ ಸ್ಟಾರ್, ನಮ್ಮೆಲ್ಲರ ನೆಚ್ಚಿನ ಅಪ್ಪು ನಮ್ಮನ್ನಗಲಿ ವರುಷವೇ ಕಳೆಯುತ್ತಾ ಬಂತು. ಆದರು ಅವರ ನೆನಪುಗಳು ಎಂದಿಗೂ ಅಜರಾಮರ. ಅವರ ಕೊನೆಯ ಸಿನಿಮಾ ಎನ್ನಲಾಗಿದ್ದ ‘ಜೇಮ್ಸ್’ ಅನ್ನು ಜನಸಾಗರವೇ ಹರಿದುಹೋಗಿ ಚಿತ್ರಮಂದಿರಗಳಲ್ಲಿ ಕಂಡದ್ದಾಯ್ತು. ಅವರನ್ನ ಪ್ರತಿಕ್ಷಣ ಸಂಭ್ರಮಿಸುತ್ತಿರೋ ಕನ್ನಡಿಗರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಕಾದಿದೆ. ಅಪ್ಪು ನಟಿಸಿರೋ ಇನ್ನೊಂದು ಸಿನಿಮಾ ತೆರೆಮೇಲೆ ಬರಲು ಸಿದ್ದವಾಗಿದ್ದು, ಆ ಚಿತ್ರದಲ್ಲಿನ ಅಪ್ಪುವಿನ ಮೊದಲ ನೋಟ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಅಪ್ಪು ಕನ್ನಡಿಗರ ಮನದಲ್ಲಿ ಎಂದಿಗೂ ಇರುತ್ತಾರೆ. ಅಭಿಮಾನಿಗಳ ಪಾಲಿಗೆ ಇವರು ದೇವರು. ಇಂತಹ ಪುನೀತ್ ರಾಜಕುಮಾರ್ ದೇವರಾಗಿ ತೆರೆಮೇಲೆ ಬಂದರೆ! ಹೌದು, ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಹೊಸ ಸಿನಿಮಾ ‘ಲಕ್ಕಿಮ್ಯಾನ್’ನಲ್ಲಿ ಅಪ್ಪು ‘ದೇವರ’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಅತಿಥಿ ಪಾತ್ರವಾಗಿದ್ದು, ಇದರಲ್ಲಿನ ಪುನೀತ್ ರಾಜಕುಮಾರ್ ಅವರ ಮೊದಲ ನೋಟವನ್ನು ಇದೇ ಜುಲೈ 25ರಂದು ಬಿಡುಗಡೆ ಮಾಡಲಿದೆ ಚಿತ್ರತಂಡ. ಈ ವಿಡಿಯೋ ಗೆ ‘A Glance at the God(ದೇವರೆಡೆಗೆ ಒಂದು ನೋಟ)’ ಎಂದು ಕರೆಯುತ್ತಿದ್ದಾರೆ. ಜುಲೈ 12ರ ಶಿವಣ್ಣನ ಹುಟ್ಟುಹಬ್ಬದ ದಿನ ಈ ವಿಷಯದ ಅಧಿಕೃತ ಘೋಷಣೆ ಮಾಡಿದೆ ಚಿತ್ರತಂಡ.

ಎಸ್ ನಾಗೇಂದ್ರ ಪ್ರಸಾದ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ, ರೋಷನಿ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದರೆ, ಅಪ್ಪು ‘ದೇವರಾಗಿ’ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಪ್ರಭುದೇವ ಅವರು ಕೂಡ ತಮ್ಮ ಅತಿಥಿ ಪಾತ್ರದ ಮೂಲಕ ರಂಜಿಸಲಿದ್ದಾರೆ. ಚಿತ್ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗೋ ಸಾಧ್ಯತೆಗಳಿದ್ದು, ಅಪ್ಪುವನ್ನು ಮತ್ತೊಮ್ಮೆ ತೆರೆಮೇಲೆ ನೋಡಲು ಕನ್ನಡಿಗರು ಕಾಯುತ್ತಿದ್ದಾರೆ.