• April 11, 2022

ಹಿಜಬ್ ಧರಿಸಿದ ಜನಪ್ರಿಯ ನಟಿ ಶ್ರುತಿ… ಕಾರಣ ಏನು ಗೊತ್ತಾ?

ಹಿಜಬ್ ಧರಿಸಿದ ಜನಪ್ರಿಯ ನಟಿ ಶ್ರುತಿ… ಕಾರಣ ಏನು ಗೊತ್ತಾ?

ಕರ್ನಾಟಕದಲ್ಲಿ ಹಿಜಾಬ್ ವಿವಾದ ಜೋರಾಗಿದೆ. ಹಿಜಾಬ್ ಧರಿಸಿ ಮಕ್ಕಳು ಶಾಲಾ ಕಾಲೇಜುಗಳಿಗೆ ಬರಬಾರದು ಎಂಬ ಫರ್ಮಾನು ಕೂಡಾ ಹೊರಡಿಸಿದೆ. ಇದರ ಮಧ್ಯೆ ನಟಿ ಹಾಗೂ ಬಿಜೆಪಿ ನಾಯಕಿ ಶ್ರುತಿ ಹಿಜಬ್ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ಅರೇ ಇವರು ಯಾಕೆ ಹಿಜಬ್ ಧರಿಸಿದ್ದಾರೆ ಎಂದು ಆಶ್ಚರ್ಯಪಡಬೇಡಿ. ಶ್ರುತಿ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಮುಸಲ್ಮಾನ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಹಿಜಬ್ ಧರಿಸಿದ್ದಾರೆ.

“13” ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರಕ್ಕೆ ನರೇಂದ್ರ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಗುಜರಿ ಅಂಗಡಿ ಮಾಲೀಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಶ್ರುತಿ ಹಾಗೂ ರಾಘವೇಂದ್ರ ರಾಜ್ ಕುಮಾರ್ 25 ವರ್ಷಗಳ ಬಳಿಕ ತೆರೆ ಮೇಲೆ ಒಟ್ಟಾಗಿ ನಟಿಸುತ್ತಿದ್ದಾರೆ. ಗೆಲುವಿನ ಸರದಾರ ಚಿತ್ರದ ಬಳಿಕ ಇಬ್ಬರೂ ಒಟ್ಟಿಗೆ ನಟಿಸಿರಲಿಲ್ಲ.

“ನಾನು ಪುನೀತ್ ರಾಜ್ ಕುಮಾರ್ ಅವರ ಜೊತೆ ದ್ವಿತ್ವ ಸಿನಿಮಾದಲ್ಲಿ ನಟಿಸಬೇಕಿತ್ತು. ಸಿನಿಮಾ ಕಥೆ ಕೇಳಿ ಒಪ್ಪಿಕೊಂಡೆ. ಸಿನಿಮಾ ಒಪ್ಪಿಕೊಂಡ ಕೆಲವೇ ದಿನಗಳಲ್ಲಿ ಪುನೀತ್ ನಿಧನರಾದರು. ಅವರ ಜೊತೆ ನಟಿಸುವ ಆಸೆ ಹಾಗೆಯೇ ಉಳಿಯಿತು” ಎಂದಿದ್ದಾರೆ ಶ್ರುತಿ.

ಈಗಾಗಲೇ ಈ ಸಿನಿಮಾದ ಮುಹೂರ್ತ ನಡೆದಿದ್ದು ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಶ್ರುತಿ. ಇದರ ಜೊತೆಗೆ “ಚಿತ್ರದ ಹೆಸರು “ನಂಬರ್ 13 “ಇಂದಿನಿಂದ ಚಿತ್ರೀಕರಣ ಪ್ರಾರಂಭ. ವಿಶೇಷವಾದ ಕಥೆ, ಕಥಾನಾಯಕ ರಾಘಣ್ಣ, ಇಷ್ಟು ವರ್ಷದ ಚಿತ್ರ ಜೀವನದಲ್ಲಿ ಮುಸ್ಲಿಂ ಮಹಿಳೆಯ ಪಾತ್ರ ಮಾಡುತ್ತಿರುವುದು ಇದೇ ಮೊದಲು, ಇಂದಿನಿಂದ ಸಾಯಿರಾಬಾನು ವಾಗಿ ನನ್ನ ಪ್ರಯಾಣ ಶುರು ನಿಮ್ಮೆಲ್ಲರ ಹಾರೈಕೆ ಇರಲಿ” ಎಂದು ಅವರು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *