• July 1, 2022

ಲಾಲಿ ಹಾಡಲಿದ್ದಾರೆ ‘ವಿಕ್ರಾಂತ್ ರೋಣ’

ಲಾಲಿ ಹಾಡಲಿದ್ದಾರೆ ‘ವಿಕ್ರಾಂತ್ ರೋಣ’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’.’ರಂಗಿತರಂಗ’ ಎಂಬ ಅದ್ಭುತ ಚಿತ್ರವೊಂದನ್ನು ಕನ್ನಡಿಗರಿಗೆ ನೀಡಿದ ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾಗೆ ಪ್ರಪಂಚದಾದ್ಯಂತ ಅಸಂಖ್ಯ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರತಂಡ ಹಲವು ಟೀಸರ್ ವಿಡಿಯೋಗಳನ್ನೂ, ಒಂದು ಹಾಡನ್ನು ಜೊತೆಗೆ ಇತ್ತೀಚಿಗಷ್ಟೇ ಟ್ರೈಲರ್ ಅನ್ನು ಕೂಡ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಪ್ರತಿಯೊಂದು ‘ವಿಕ್ರಾಂತ್ ರೋಣ’ನ ಅಂಶಕ್ಕೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಚಿತ್ರದ ಬಿಡುಗಡೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ತನ್ನ ಇನ್ನೊಂದು ಹಾಡನ್ನು ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ.

ಅನೂಪ್ ಭಂಡಾರಿ ಅವರು ನಿರ್ದೇಶನವಷ್ಟೇ ಅಲ್ಲದೇ ಕಥೆ, ಚಿತ್ರಕತೆ, ಸಂಭಾಷಣೆ ಹಾಗು ಸಾಹಿತ್ಯಗಳೆಲ್ಲದರಲ್ಲೂ ಕೈ ಹಾಕುತ್ತಾರೆ. ಇದಕ್ಕಿಂತ ಮೊದಲು ಬಿಡುಗಡೆಯಾದ ಜನಮೆಚ್ಚಿದ ‘ರಾ ರಾ ರಕ್ಕಮ್ಮ’ ಹಾಡನ್ನು ಸಹ ಅವರೇ ಬರೆದಿದ್ದು ಇದೀಗ ಚಿತ್ರದಿಂದ ಬಿಡುಗಡೆ ಪಡೆಯುತ್ತಿರೋ ಹೊಸ ‘ಲಾಲಿ ಹಾಡಿ’ನ ಕನ್ನಡ ಆವೃತ್ತಿಯನ್ನು ಕೂಡ ಅವರ ಸಾಹಿತ್ಯದಿಂದಲೇ ರಚಿಸಲಾಗಿದೆ. ಈ ಲಾಲಿ ಹಾಡಿಗೆ ‘ರಾಜಕುಮಾರಿ’ ಎಂದು ಹೆಸರಿಡಲಾಗಿದ್ದು, ಐದು ಭಾಷೆಗಳಲ್ಲಿ ಐದು ಬೇರೆ ಬೇರೆ ದಿನಗಳಂದು ಬಿಡುಗಡೆ ಕಾಣುತ್ತಿದೆ. ಜೂನ್ 2ರಂದು ಕನ್ನಡದಲ್ಲಿ, ಜೂನ್ 3ರಂದು ಮಲಯಾಳಂನಲ್ಲಿ, ಜೂನ್ 4ರಂದು ತೆಲುಗಿನಲ್ಲಿ , ಜೂನ್ 5ರಂದು ಹಿಂದಿಯಲ್ಲಿ ಹಾಗು ಜೂನ್ 6ರಂದು ತಮಿಳು ಭಾಷೆಗಯಲ್ಲಿ ಪ್ರತಿದಿನವೂ ಸಂಜೆ 5:02ಕ್ಕೆ ಬಿಡುಗಡೆಗೊಳ್ಳುತ್ತಿದೆ ಈ ಹೊಸ ಹಾಡು. ‘ಟಿ-ಸೀರೀಸ್’ ಹಾಗು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ಹಾಡಿಗೆ ಅಜನೀಶ್ ಲೋಕನಾಥ್ ಅವರ ಸಂಗೀತವಿದ್ದು, ವಿಜಯ್ ಪ್ರಕಾಶ್ ಅವರು ದನಿಯಾಗಿದ್ದಾರೆ

ವಿಶೇಷವೆಂದರೆ ಈ ಹಾಡಿನ ಕನ್ನಡ ಆವೃತ್ತಿಯ ಸಾಹಿತ್ಯವನ್ನು ಈಗಾಗಲೇ ಚಿತ್ರತಂಡ ಹೊರಬಿಟ್ಟಿದೆ. ಸೀದಾ ಮನಸ್ಸಿನಿಂದ ಹೊರಟು ಮನಸ್ಸನ್ನೇ ಸೆಳೆಯುವಂತಿರರೊ ee ಮಧುರ ಸಾಲುಗಳಿಗೆ ಕನ್ನಡಿಗರು ಮನಸೋತಿದ್ದಾರೆ. ಇದೇ ಜುಲೈ 28ರಂದು ಪ್ರಪಂಚದಾದ್ಯಂತ ಬಿಡುಗಡೆಯಗುತ್ತಿರೋ ‘ವಿಕ್ರಾಂತ್ ರೋಣ’ನನ್ನು 3ಡಿ ಯಲ್ಲಿ ಕಣ್ತುಂಬಿಕೊಳ್ಳಲು ಸಿನಿರಸಿಕರು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *