- June 14, 2022
‘ಹರಿಕಥೆ ಅಲ್ಲ ಗಿರಿಕಥೆ’ ಹೇಳಹೊರಟಿರೋ ರಿಷಬ್ ಶೆಟ್ಟಿ ಹಾಗು ತಂಡ.

ಸ್ಯಾಂಡಲ್ವುಡ್ ನಲ್ಲಿ ಭರವಸೆ ಮೂಡಿಸಿ, ತಮ್ಮದೇ ಅಭಿಮಾನಿ ಬಳಗವನ್ನ ಪಡೆದಿರೋ ಕೆಲವೇ ಕೆಲವು ನಟ-ನಿರ್ದೇಶಕರಲ್ಲಿ ರಿಷಬ್ ಶೆಟ್ಟಿ ಅವರು ಒಬ್ಬರು. ಒಂದಾದ ಮೇಲೆ ಒಂದರಂತೆ ಸಾಲು ಸಾಲು ಉತ್ತಮ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡುತ್ತಿರುವ ಇವರು, ಇದೀಗ ‘ಹರಿಕಥೆ ಅಲ್ಲ ಗಿರಿಕಥೆ’ ಹೇಳಹೊರಟಿದ್ದಾರೆ. ಆದರೆ ಈ ಬಾರಿ ಅವರದ್ದು ಕೇವಲ ನಟನ ಪಾತ್ರ. ನಿರ್ದೇಶನದ ಜವಾಬ್ದಾರಿಯನ್ನು ಅವರ ತಂಡದವರೇ ಆದ ಅನಿರುಧ್ ಮಹೇಶ್ ಹಾಗು ಕರಣ್ ಅನಂತ್ ವಹಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಪಾತ್ರಗಳ ಪರಿಚಯವನ್ನ ಪೋಸ್ಟರ್ ಗಳ ಮೂಲಕ ಹೇಳುತ್ತಿರುವ ಚಿತ್ರತಂಡ, ಟ್ರೈಲರ್ ಬಿಡುಗಡೆಗೆ ಮುಹೂರ್ತ ಇಟ್ಟಿದೆ.


ಇದೇ ಜೂನ್ 23ರಂದು ತೆರೆಕಾಣುತ್ತಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾದರೆ ‘ಲವ್ ಮೊಕ್ಟೇಲ್’ ಖ್ಯಾತಿಯ ರಚನಾ ಇಂದರ್ ‘ಗಿರಿಜಾ ಥಾಮಸ್’ ಎಂಬ ಪಾತ್ರದಲ್ಲಿ ಹಾಗು, ತೇಜಸ್ವಿನಿ ಪೂಣಚ ಅವರು ‘ಖುಷಿ ಜೋಕುಮಾರ ಸ್ವಾಮಿ’ ಎಂಬ ಪಾತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಇನ್ನು ‘ಇನ್ಸ್ಪೆಕ್ಟರ್ ಅಭಿಮನ್ಯು’ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ‘ವಿಲನ್ ಗಿರಿ’ಯಾಗಿ ರಕ್ಷಿತ್, ಬಣ್ಣ ಹಚ್ಚಿದ್ದಾರೆ. ತಮ್ಮದೇ ಹಳೆ ತಂಡದ ಜೊತೆಗೆ ಈ ಸಿನಿಮಾ ಮಾಡಿದ್ದು, ನಿರ್ದೇಶಕ ಅನಿರುಧ್ ಮಹೇಶ್ ಅವರು ‘5D ಥಾಮಸ್’ ಆಗಿ ಬಣ್ಣ ಹಚ್ಚಿದ್ದಾರೆ. ‘ಸೂಪರ್ ಸೂಪರ್’ ಎಂಬ ಪಾತ್ರದಲ್ಲಿ ಕಿರಣ್, ‘ಮೊಬೈಲ್ ರಘು’ ಪಾತ್ರದಲ್ಲಿ ರಘು ಪಾಂಡೇಶ್ವರ್, ಪ್ರೇಕ್ಷಕರನ್ನು ನಗಿಸಲು ಕಾಯುತ್ತಿದ್ದಾರೆ. ಈ ಬಗೆಯ ವಿಭಿನ್ನ ರೀತಿಯ ಪಾತ್ರಗಳ ಪರಿಚಯ ನೀಡೋ ಪೋಸ್ಟರ್ ಗಳು ಎಲ್ಲೆಡೆ ಸದ್ದು ಮಾಡುತ್ತಿವೆ.


ಈಗಾಗಲೇ ವಾಸುಕಿ ವೈಭವ್ ಅವರ ಸಂಗೀತದಲ್ಲಿ ಮೂಡಿಬಂದ ‘ಜೂನಿಯರ್ ಮೊನಾಲಿಸಾ’ ಹಾಗು ‘ಬವರಾಚಿ’ ಎಂಬ ಎರಡು ವಿಶೇಷ ರೀತಿಯ ಹಾಡುಗಳನ್ನು ಬಿಡುಗಡೆ ಮಾಡಿರೋ ಚಿತ್ರತಂಡ ಎಲ್ಲೆಡೆ ಪ್ರಶಂಸೆ ಪಡೆಯುತ್ತಿದೆ. ಸದ್ಯ ಟ್ರೈಲರ್ ಬಿಡುಗಡೆಗೆ ಸಜ್ಜಾಗಿರುವ ಇವರು, ನಾಳೆ(ಜೂನ್ 14)ರಂದು ಸಿನಿಮಾದ ಟ್ರೈಲರ್ ಅನ್ನು ಸರಿಯಾಗಿ ಸಂಜೆ 4:05ಕ್ಕೆ ‘ಆನಂದ್ ಆಡಿಯೋ’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಲಿದೆ. ಹಾಸ್ಯಭರಿತ ಕಥೆ ಹೊಂದಿರೋ ಈ ಸಿನಿಮಾದ ಪ್ರತಿಯೊಂದು ಹೆಜ್ಜೆಯು ಸಹ ಪ್ರೇಕ್ಷಕರನ್ನು ಚಿತ್ರದೆಡೆಗೆ ಇನ್ನಷ್ಟು ಸೆಳೆಯುತ್ತಿದೆ.



